ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಅಪರಿಚಿತ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿಯ ಮುರಳಿ ಮಿಲ್ಟ್ರಿ ಹೋಟೆಲ್ ಮುಂಭಾಗ ಮಂಗಳವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಸುಮಾರು 50 ರಿಂದ 55 ವರ್ಷವಾಗಿದೆ.

ನಾಗಮಂಗಲ:

ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಅಪರಿಚಿತ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಎ.ನಾಗತಿಹಳ್ಳಿಯ ಮುರಳಿ ಮಿಲ್ಟ್ರಿ ಹೋಟೆಲ್ ಮುಂಭಾಗ ಮಂಗಳವಾರ ಸಂಜೆ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಸುಮಾರು 50 ರಿಂದ 55 ವರ್ಷವಾಗಿದೆ. 5.4ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ತಲೆಕೂದಲು, ಪಾಚಿ ಬಣ್ಣದ ತುಂಬುತೋಳಿನ ಶರ್ಟ್, ನೀಲಿಬಣ್ಣದ ಬನಿಯನ್ ಧರಿಸಿದ್ದ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ.

ತಾಲೂಕಿನ ಎ.ನಾಗತಿಹಳ್ಳಿ ಬಳಿ ಅಪರಿಚಿತ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ಸ್ಯಾಂಟ್ರೋ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಾಯವಾಗಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಜಿ.ಜಿತೇಂದ್ರಕುಮಾರ್ ನೇತೃತ್ವದ ಪೊಲೀಸರು ವಾರಸುದಾರರ ಪತ್ತೆಗಾಗಿ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಸಮೀಪದ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.

ಎ.ನಾಗತಿಹಳ್ಳಿಯ ಮಿಲ್ಟ್ರಿ ಹೋಟೆಲ್ ಕಾರ್ಮಿಕ ರಂಗಸ್ವಾಮಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣೆ ಪೊಲೀಸರು, ಘಟನೆಯಲ್ಲಿ ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಅಥವಾ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಜಿ.ಜಿತೇಂದ್ರಕುಮಾರ್ (ಮೊ.9480804854) ಅವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು

ಮಂಡ್ಯ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತಾಲೂಕಿನ ಯಲಿಯೂರು ರೈಲು ನಿಲ್ದಾಣದ ಬಳಿ ನಡೆದಿದೆ.ಮೃತ ವ್ಯಕ್ತಿಯು 50 ರಿಂದ 55 ವರ್ಷವಾಗಿದ್ದು, ಎತ್ತರ 5.6, ಹಸಿರು ಬಣ್ಣದ ಅರ್ಧ ತೋಳಿನ ಶರ್ಟ್ ಮತ್ತು ಹಸಿರು ಬಣ್ಣದ ಜರಿಯುಳ್ಳ ಬಿಳಿ ಬಣ್ಣದ ಪಂಚೆಯನ್ನು ಧರಿಸಿದ್ದಾರೆ. ವಾರಸುದಾರರ ಮಾಹಿತಿ ದೊರೆತಲ್ಲಿ ದೂ.ಸಂ. 08212516579, ಮೊ-9480802122 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ರೈಲ್ವೆ ಪೊಲೀಸ್ ಉಪಠಾಣೆ ಸಹಾಯಕ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಮಂಡ್ಯ: ತಾಲೂಕಿನ ಹೆಬ್ಬಕವಾಡಿ ಮತ್ತು ಮಳವಳ್ಳಿ ರಸ್ತೆಯ ಸುತ್ತುಕಟ್ಟೆ ಚಾನೆಲ್ ನ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ 40 ರಿಂದ 50 ವರ್ಷವಾಗಿದ್ದು, 5.2 ಎತ್ತರವಿದ್ದು, ಸಿಮೆಂಟ್ ಕಲರ್ ಪ್ಯಾಂಟ್ ಮತ್ತು ಮಾಸಲು ಬಣ್ಣದ ಬನಿಯನ್ ಅನ್ನು ಧರಿಸಿದ್ದಾನೆ. ವಾರಸುದಾರರ ಮಾಹಿತಿ ದೊರೆತಲ್ಲಿ ಮೊ-9480804800, ದೂ08232224200, ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.