ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ವಿಭಾಗದ ಸೆಸ್ಕ್ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ಶೇ.53.1ರಷ್ಟು ಮುಗಿದಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಶೇ 48.58, ಮಂಡ್ಯ ಜಿಲ್ಲೆಯಲ್ಲಿ ಶೇ59.68, ಕೊಡಗು ಜಿಲ್ಲೆಯಲ್ಲಿ ಶೇ56.70 ಚಾಮರಾಜನಗರ ಜಿಲ್ಲೆಯಲ್ಲಿ ಶೇ55.23, ಹಾಸನ ಜಿಲ್ಲೆಯಲ್ಲಿ ಶೇ 52.90ರಷ್ಟು ಪರಿಷ್ಕರಣೆ ಪೂರ್ಣಗೊಂಡಿದೆ ಎಂದರು.
ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯೋಜನೆ ದುರುಪಯೋಗ ಆಗದಂತೆ ತಡೆಯುವ ಉದ್ದೇಶದಿಂದ ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಪಂಚಗ್ಯಾರಂಟಿ ಯೋಜನೆಗಳಿಗಾಗಿ ಮದ್ದೂರು ತಾಲೂಕಿಗೆ ರಾಜ್ಯ ಸರ್ಕಾರ ಒಟ್ಟು 830.15 ಕೋಟಿ ರೂ. ಹಣ ವೆಚ್ಚ ಮಾಡಿದೆ ಎಂದು ವಿವರಿಸಿದರು.ಮರಣ ಹೊಂದಿದವರ ಖಾತೆಗೂ ಗೃಹಲಕ್ಷ್ಮಿ ಹಣ ಸಂದಾಯವಾಗುತ್ತಿದೆ. ರಾಜ್ಯದಲ್ಲಿ 1.24 ಕೋಟಿ ಫಲಾನುಭವಿಗಳು ಇದ್ದು, ಇವರಲ್ಲಿ 1,95,224 ಮಂದಿ ಫಲಾನುಭವಿಗಳು ಮೃತಪಟ್ಟಿದ್ದಾರೆ. ಮದ್ದೂರು ತಾಲೂಕಿನಲ್ಲಿ 2197 ಫಲಾನುಭವಿಗಳು ಮೃತಪಟ್ಟಿದ್ದಾರೆ. ಆದರೆ, ಮೃತರ ಖಾತೆಗೆ ಹಣ ಜಮೆಯಾಗುವ ಮೂಲಕ ಯೋಜನೆ ದುರುಪಯೋಗ ಆಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆ ಪರಿಷ್ಕರಣೆಗೆ ಸೂಚಿಸಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಿದ್ದ 61ಲಕ್ಷ ರೂ ಹಣ ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಮದ್ದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ರಾಜಣ್ಣ, ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.