ಕನ್ನಡಪ್ರಭ ವಾರ್ತೆ ಬೇಲೂರುಕಾಡಾನೆ ದಾಳಿಯಿಂದ ಕಣಗುಪ್ಪೆ ಗ್ರಾಮದ ರೈತ ಧರ್ಮರಾಜು (50) ದೆಂಬುವವರು ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಕ್ಕಪಕ್ಕದ ಗ್ರಾಮಗಳ ಜನರು ಸೇರಿ ಪ್ರತಿಭಟನೆ ನಡೆಸಿದರು. ಧರ್ಮರಾಜು ಅವರು ಬುಧವಾರ ಮನೆಯಿಂದ ಬೇಲೂರಿಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.ಧರ್ಮರಾಜು ಅವರಿಗಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿರಂತರ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಬುಧವಾರ ರಾತ್ರಿ ಚಿಕ್ಕಹಸಡೆ ಗ್ರಾಮದ ಸಮೀಪ ಧರ್ಮರಾಜು ಅವರು ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯ ಯುವಕನೊಬ್ಬ ಗಮನಿಸಿದ್ದ ಎನ್ನಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಚಿಕ್ಕಹಸಡೆ ಹಾಗೂ ಹಿರೇಹಸಡೆ ಗ್ರಾಮಗಳ ನಡುವಿನ ಕಾಫಿ ತೋಟಗಳಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟವನ್ನು ತೀವ್ರಗೊಳಿಸಿದ್ದರು.ಹುಡುಕಾಟ ಮುಂದುವರಿದ ಸಂದರ್ಭದಲ್ಲಿ ಶುಕ್ರವಾರ ಸಂಜೆ ಸುಮಾರು 4.30ರ ವೇಳೆಗೆ, ಹಿರೇಹಸಡೆ ಗ್ರಾಮದ ಸುದರ್ಶನ್ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಧರ್ಮರಾಜು ಅವರ ಶವ ಪತ್ತೆಯಾಗಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದ ಹಿರೇಹಸಡೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿತ್ತು. ಶವ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚುತ್ತಿದ್ದು, ರೈತರು ಜೀವಭಯದಲ್ಲಿ ಕೃಷಿ ಚಟುವಟಿಕೆ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ದಾಳಿಯಿಂದ ರೈತರ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಹಾಗೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.ಕಾಡಾನೆ ದಾಳಿಯಿಂದ ರೈತನ ಸಾವಿಗೆ ಕಾರಣವಾದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಶವವನ್ನು ಸ್ಥಳದಿಂದ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಪರಿಣಾಮ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ‘‘ಕಾಡಾನೆಗಳು ಕಾಫಿ ತೋಟಗಳು, ಕೃಷಿ ಜಮೀನುಗಳು ಹಾಗೂ ಗ್ರಾಮಗಳ ಅಂಚಿನವರೆಗೆ ನಿರ್ಭಯವಾಗಿ ಸಂಚರಿಸುತ್ತಿವೆ. ರೈತರು ಬೆಳಗ್ಗೆ ಅಥವಾ ಸಂಜೆ ತೋಟಗಳಿಗೆ ತೆರಳುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ನಷ್ಟದ ಜತೆಗೆ ಮಾನವ ಜೀವಗಳೂ ಬಲಿಯಾಗುತ್ತಿವೆ. ಸರಣಿ ಘಟನೆಗಳಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಕಾಡಾನೆಗಳನ್ನು ಕೇವಲ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಸುವ ಬದಲು, ಜನವಸತಿ ಪ್ರದೇಶಗಳಿಂದ ದೂರವಿರುವ ಸುರಕ್ಷಿತ ಅರಣ್ಯ ಪ್ರದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ಮತ್ತು ಪರಿಣಾಮಕಾರಿ ಯೋಜನೆ ಜಾರಿಗೊಳಿಸಬೇಕು. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಘಟನಾ ಸ್ಥಳಕ್ಕೆ ಶಾಸಕ ಎಚ್ ಕೆ ಸುರೇಶ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾಲೂಕು ದಂಡಾಧಿಕಾರಿ ಶ್ರೀಧರ್‌ ಕಂಕನವಾಡಿ, ಅರೇಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶೋಭ ಬರಮಣ್ಣನವರ, ತಾಲೂಕು ಅರಣ್ಯಾಧಿಕಾರಿ ಯತೀಶ್, ಕಾಫಿ ಬೆಳೆಗಾರರ ಸಂಘದ ಶಾರೀಬ್, ಗ್ರಾಮಸ್ಥರಾದ ಮಂಜು ಕಿತ್ತಾವರ, ನಂದೀಶ್, ಕೆ. ಜಿ. ಕುಮಾರ್‌, ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.