ಸವಣೂರು: ಧರ್ಮಗ್ರಂಥಗಳಲ್ಲಿ ತಾಯಂದಿರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಮಹಿಳೆಯರನ್ನು ಗೌರವಿಸುವ ಸಮಾಜದಲ್ಲಿ ದೇವತೆಗಳೇ ನೆಲೆಸುತ್ತವೆ ಎಂದು ಶಾಸಕ ಯಾಸೀರಹ್ಮದಖಾನ ಪಠಾಣ ಹೇಳಿದರು.

ತಾಲೂಕಿನ ಮನ್ನಂಗಿ ಗ್ರಾಮದ ದ್ಯಾಮವ್ವದೇವಿ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನ್ನಂಗಿ ಗ್ರಾಮದಲ್ಲಿ ಹಿರಿಯರು ಮತ್ತು ಗುರುಗಳ ಮೂಲಕ ಈ ಮೌಲ್ಯಗಳನ್ನು ನಾವು ಸ್ಪಷ್ಟವಾಗಿ ಕಾಣಬಹುದು. 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರ ತತ್ವಗಳನ್ನು ಸ್ಮರಿಸಿದ ಅವರು, ಸಮಾನತೆ, ಮಾನವೀಯತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಸಂದೇಶವನ್ನು ಸಮಾಜಕ್ಕೆ ನೀಡಿದವರಾಗಿದ್ದಾರೆ ಎಂದು ವಿವರಿಸಿದರು.

ಹಾನಗಲ್ ಪ್ರದೇಶ ಕುಮಾರ ಶಿವಯೋಗಿಗಳು, ಪಂಚಾಕ್ಷರಿ ಗವಾಯಿಗಳು ಸೇರಿದಂತೆ ಅನೇಕ ಸಂತರ ತವರೂರಾಗಿದೆ. ಈ ಭೂಮಿ ಪವಿತ್ರವಾದ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಕೇಂದ್ರವಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದ ಕಾಶಿಯಾಗಿ ರೂಪುಗೊಳ್ಳುವ ಉದ್ದೇಶದಿಂದ ಬಿಸ್ನಹಳ್ಳಿ ಕಾಶಿ ಮಠದ ಅಭಿವೃದ್ಧಿಗೆ ಎರಡು ಕೋಟಿ ರುಪಾಯಿ ಅನುದಾನ ನೀಡಿರುವುದಾಗಿ ತಿಳಿಸಿದರು. ಇದರಲ್ಲಿ ಒಂದು ಕೋಟಿ ಬಿಡುಗಡೆಗೊಂಡಿದ್ದು, ಉಳಿದ ಮೊತ್ತವನ್ನೂ ಸಂಪೂರ್ಣವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂದು ಗುರು ರೇಣುಕಾಚಾರ್ಯರ ಸಂದೇಶವನ್ನು ಉಲ್ಲೇಖಿಸಿದ ಅವರು, ಯಾವುದೇ ಒಂದು ಧರ್ಮಕ್ಕಿಂತ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದರು.


ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಅನುದಾನ ಒದಗಿಸಿರುವುದಾಗಿ ತಿಳಿಸಿದ ಅವರು, ಸ್ಥಳೀಯ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ₹ 10 ಲಕ್ಷ ಮತ್ತು ಮಾರುತಿ ದೇವಸ್ಥಾನಕ್ಕೆ ₹5 ಲಕ್ಷ ನೀಡಲಾಗಿದೆ. ಇನ್ನೂ ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನೂ ನೀಡಿದರು.

ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರಿಗೆ ಆತಂಕವಿರುವುದನ್ನು ಉಲ್ಲೇಖಿಸಿ, ಉತ್ತಮ ಮಳೆ, ಬೆಳೆ ಹಾಗೂ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು. ತಂದೆ-ತಾಯಿಯನ್ನು ಗೌರವಿಸಿ ಸೇವೆ ಮಾಡುವುದೇ ನಿಜವಾದ ಧರ್ಮ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೀರೂರಿನ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು, ಶಿವಪ್ರಸಾದ ದೇವರು, ವಿರೂಪಾಕ್ಷ ದೇವರು, ಅನ್ನದಾನ ಶಾಸ್ತ್ರಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ರುದ್ರಪ್ಪ ಸಾತನಳ್ಳಿ, ನಿಂಗನಗೌಡ ನೆರೆಗಲ್, ಡಾ. ಶೋಭಾ ನಿಸ್ಸೀಮಗೌಡ್ರ ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.