ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೆಲವು ಪ್ರದೇಶಗಳಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇದ್ದು, ಇಡೀ ದಿನ ಎಲ್ಲಿಯೇ ಕುಳಿತರೂ ಬಿಸಿಬಿಸಿ...!

ಮನೆಯಲ್ಲಿ ಕುಳಿತರೂ, ಹೊರಗಡೆ ಹೋದರೂ ಸಮಾಧಾನವಿಲ್ಲದಂತಾಗಿದೆ. ಕ್ಷಣಕಾಲ ಫ್ಯಾನ್, ಎಸಿ (ಹವಾನಿಯಂತ್ರಣ) ಇಲ್ಲದಿದ್ದರೆ, ಚಡಪಡಿಕೆ ಆರಂಭವಾಗುತ್ತದೆ. ವಿದ್ಯುತ್ ಸರಬರಾಜು ಕಡಿತಗೊಂಡರಂತೂ ಮನೆಯಲ್ಲಿ ಕುಳಿತುಕೊಳ್ಳಲು ಆಗುವುದೇ ಇಲ್ಲ.

ಇಲ್ಲಿಯವರೆಗೆ 36 ಡಿಗ್ರಿ ಸೆಲ್ಸಿಯಸ್ ಆಸು–ಪಾಸಿನಲ್ಲಿದ್ದ ಉಷ್ಣಾಂಶ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚಾಗುತ್ತಲೇ ಸಾಗಿದೆ.

ಗ್ರಾಮೀಣ ಭಾಗದ ಜನರು ಬೇವಿನಮರ, ಅರಳಿಮರ, ಹೊಂಗೆ ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವುದರಿಂದ ಮನೆಗಳಲ್ಲಿ ವಿಪರೀತ ಸೆಖೆ, ಸುಸ್ತು ಆಗುತ್ತಿದ್ದು, ವೃದ್ಧರು, ಮಕ್ಕಳ ಪರಿಸ್ಥಿತಿ ಹೇಳತೀರದಾಗಿದೆ.


ತಂಪು ಪಾನೀಯ ಮೊರೆ:

ಬಿಸಿಲಿನ ತಾಪ ಹೆಚ್ಚಳದಿಂದ ಪಾರಾಗಲು ಜನರು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ಮಾತ್ರ ತೆರೆಯುವ ಲಸ್ಸಿ ಕೇಂದ್ರಗಳು ಅಲ್ಲಲ್ಲಿ ತಲೆ ಎತ್ತಿವೆ. ಮಜ್ಜಿಗೆ, ಎಳನೀರು, ಜ್ಯೂಸ್, ಐಸ್‌ಕ್ರೀಂ, ಕಬ್ಬಿನ ಹಾಲು ಸೇವಿಸುವ ಮೂಲಕ ದಾಹ ತಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ತಂಪು ಪಾನೀಯ ಅಂಗಡಿಗಳ ಮುಂದೆ ಮಧ್ಯಾಹ್ನದ ವೇಳೆ ಜನರು ಗುಂಪು, ಗುಂಪಾಗಿ ಸೇರುತ್ತಿದ್ದಾರೆ. ಅವಲಕ್ಕಿ ಮೊಸರು ಸೇವಿಸುತ್ತಿದ್ದಾರೆ. ಬೆಳಗ್ಗೆ 9-10 ಗಂಟೆಗೆಲ್ಲ ಉರಿ ಬಿಸಿಲಿನಿಂದ ಜನ ಕಂಗಾಲಾಗುತ್ತಿದ್ದಾರೆ. ಅದರಲ್ಲೂ ಮಧ್ಯಾಹ್ನ 12 ಗಂಟೆ ಆನಂತರದ ಬಿಸಿಲು. ವ್ಯಾಪಾರ ವಹಿವಾಟಿನ ಮೇಲೂ ಈ ಬಿಸಿಲು ಪ್ರತಿಕೂಲ ಪರಿಣಾಮ ಬೀರಿದೆ.

ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಆಗಿದೆ. ತಾಪಮಾನ ಹೆಚ್ಚಾಗಿರುವ ಕಾರಣ ತಂಪು ಪಾನೀಯ ಅಂಗಡಿಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಎಳನೀರು ದರ ₹60, ಕಲ್ಲಂಗಡಿ ಒಂದು ಕೆಜಿಗೆ ₹40, ಜ್ಯೂಸ್ ಬೆಲೆ ₹40-60ಕ್ಕೆ ಏರಿಕೆಯಾಗಿದೆ.

ವೈದ್ಯರ ಸಲಹೆ: ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದು 38 ಡಿಗ್ರಿ ದಾಟುವ ಸಾಧ್ಯತೆ ಇದೆ. ವಯೋವೃದ್ಧರು ಮತ್ತು ಮಕ್ಕಳು ಪ್ರಯಾಣ ಮಾಡಬಾರದು. ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ಹೆಚ್ಚಾಗಿ ನೀರು ಕುಡಿಯಬೇಕು. ಮಜ್ಜಿಗೆ, ಎಳನೀರು ಸೇವಿಸಬೇಕು. ನಿಂಬೆಹಣ್ಣಿನ ಶರಬತ್ತು ಸೇವಿಸಬೇಕು. ಹೊರಗಿನ ತಂಪು ಪಾನಿಯಗಳನ್ನು ಸಾದ್ಯವಾದಷ್ಟು ಕಡಿಮೆ ಮಾಡಬೇಕು ಎಂಬುದು ವೈದ್ಯರ ಸಲಹೆಯಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಭಾರಿ ಬಿಸಿಲು. ಮುಂದಿನ ಎರಡು ತಿಂಗಳು ಹೇಗೆ ಜೀವನ ಕಳೆಯಬೇಕು ಎಂಬುದೇ ತಿಳಿಯುತ್ತಿಲ್ಲ. ದೇಹವನ್ನು ತಂಪು ಮಾಡಿಕೊಳ್ಳಲು ಪ್ರತಿದಿನ ನೂರಾರು ರುಪಾಯಿ ಖರ್ಚು ಮಾಡಿದರೂ ಸಮಾಧಾನವಾಗುತ್ತಿಲ್ಲ ಎಂದು ದೋಟಿಹಾಳ ನಿವಾಸಿ ಶಿವರಾಜ ತಟ್ಟಿ ತಿಳಿಸಿದ್ದಾರೆ.

ವಿಜಯಪುರ, ಆಲಮಟ್ಟಿ, ನಿಡಗುಂದಿ ಸೇರಿದಂತೆ ಅನೇಕ ನಗರಗಳಿಂದ ಕಲ್ಲಂಗಡಿ ಹಣ್ಣುಗಳನ್ನು ಖರೀದಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಬೇಸಿಗೆಯ ಆರಂಭದ ದಿನಗಳಲ್ಲಿ ಬಿಸಿಲು ಬಹಳಷ್ಟಿದೆ. ಕಲ್ಲಂಗಡಿ, ಕಬ್ಬಿನಹಾಲು, ಎಳನೀರು ಸೇವನೆಗೆ ಬರುತ್ತಿದ್ದಾರೆ. ವ್ಯಾಪಾರ ಉತ್ತಮವಾಗಿದೆ ಎಂದು , ಕುಷ್ಟಗಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.