ಸಾರಾಂಶ
ಶಿರಸಿ: ಬಿಜೆಪಿ ನಮಗೆಲ್ಲರಿಗೂ ತಾಯಿ ಇದ್ದಂತೆ. ಏನೂ ಇಲ್ಲದ ನನಗೆ ಎಲ್ಲ ಅಧಿಕಾರ ಅನುಭವಿಸಲು ಅವಕಾಶ ನೀಡಿದೆ. ಅದರ ಶುದ್ಧಿಕರಣಕ್ಕೆ ಹೊರಬಂದಿದ್ದೇನೆ. ಇದರ ಕುರಿತು ಚರ್ಚೆ ನಡೆದ ಬಳಿಕ ಬಿಜೆಪಿಗೆ ಹೋಗೇ ಹೋಗುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿಯನ್ನು ನಾನೊಬ್ಬನೆ ಅಲ್ಲ. ಅನೇಕ ಹಿರಿಯರು ತಪಸ್ಸಿನಿಂದ ಕಟ್ಟಿ ಬೆಳೆಸಿದ್ದಾರೆ. ಅನೇಕರು ಬೆವರಿನ ಹನಿಯಂತೆ ರಕ್ತ ಸುರಿಸಿ ಪಕ್ಷವನ್ನು ಸಂಘಟಿಸಿದ್ದಾರೆ. ಆದ ಕಾರಣ ದೇಶದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದರು.
ಕುಟುಂಬ ರಾಜಕಾರಣ ಮುಕ್ತ ಮಾಡುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಕರ್ನಾಟಕ ದೇಶದಿಂದ ಹೊರಗಿದೆಯಾ? ಅಪ್ಪ ಮುಖ್ಯಮಂತ್ರಿಯಾಗಿದ್ದರು. ಮಗ ಶಾಸಕ, ಅಲ್ಲದೇ ರಾಜ್ಯಾಧ್ಯಕ್ಷ. ಇನ್ನೊಬ್ಬ ಮಗ ಸಂಸದ. ಇದರ ವಿರುದ್ಧ ನಾನು ಲೋಕಸಭಾ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದರೆ ಉಚ್ಚಾಟನೆ ಮಾಡಿದ್ದಾರೆ ಎಂದರು.ಚುನಾವಣೆಯಲ್ಲಿ ಸೋಲುತ್ತೇನೆ ಎಂದು ತಿಳಿದಿತ್ತು. ಒಂದು ಕುಟುಂಬದ ಕೈನಲ್ಲಿ ಸಿಲುಕಿ ಪಕ್ಷ ಅಧೋಗತಿಗೆ ಹೋಗುತ್ತಿದೆ. ಹಿಂದುತ್ವ ಪಕ್ಕಕ್ಕೆ ಸರಿದಿದೆ. ಸ್ವಜನ ಪಕ್ಷಪಾತ ನಡೆಯುತ್ತಿದೆ ಎಂದು ಸಾಕಷ್ಟು ಬಾರಿ ವರಿಷ್ಠರ ಗಮನಕ್ಕೆ ತಂದಿದ್ದೆ. ಆದರೂ ನನ್ನ ಮಾತು ಕೇಳಿಲ್ಲ ಎಂದರು.
ಗೂಂಡಾಗಳಿಗೆ ಕಾಂಗ್ರೆಸ್ ರಕ್ಷಣೆ: ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆ ಸಿಗುತ್ತದೆ ಎಂದುಕೊಂಡು ಹಿಂದೂ ದೇವಾಲಯ, ಹಿಂದೂ ಹೆಣ್ಣುಮಕ್ಕಳ ಮೇಲೆ ಅಪಮಾನದ ದುಷ್ಕೃತ್ಯ ನಡೆಯುತ್ತಲೇ ಇರುತ್ತದೆ. ಯಾವುದೇ ಜಾತಿ ಇರಲಿ, ಇದು ನನ್ನ ಧರ್ಮ, ಯಾವುದೇ ಹೆಣ್ಣುಮಕ್ಕಳು ಇರಲಿ, ನನ್ನ ಮಗಳು, ಯಾವುದೇ ಮಠದ ಸ್ವಾಮೀಜಿ ಇರಲೀ ನಮ್ಮ ಸ್ವಾಮೀಜಿ ಎಂದು ತೀರ್ಮಾನ ಮಾಡಿದಾಗ ಹಿಂದೂ ಸಮಾಜ ಜಾಗೃತವಾಗುತ್ತದೆ. ಆಗ ಹಿಂದೂ ದ್ರೋಹಿ, ರಾಷ್ಟ್ರದ್ರೋಹಿಗಳಿಗೆ ಭಯ ಹುಟ್ಟುತ್ತದೆ ಎಂದರು.ಮುಸ್ಲಿಮರನ್ನು ರಕ್ಷಣೆ ಮಾಡುವುದರಿಂದ ಅಧಿಕಾರ ಉಳಿಯುತ್ತದೆ ಎಂಬ ಭ್ರಮೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರನ್ನು ನಂಬುತ್ತಿರಲಿಲ್ಲ. ಈಗ ಆ ಭ್ರಮೆಯಿಂದ ಹೊರಬರುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಓಡಿ ಹೋಗುತ್ತಿದ್ದಾರೆ. ಹಿಂದೆ ಕೇಸರಿ ಪೇಟ ಹಾಕಿದರೆ ಕಿತ್ತೊಗೆಯುತ್ತಿದ್ದರು. ಕುಂಕುಮ ಹಚ್ಚಿದರೆ ಅಳಿಸಿ ಹಾಕುತ್ತಿದ್ದರು. ಸಿದ್ದರಾಮಯ್ಯನರಿಗೆ ಈಗ ಭಕ್ತಿ ಬಂದಿದೆ. ಅದನ್ನು ಸ್ವಾಗತಿಸುತ್ತೇನೆ. ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಅಪಮಾನ ಮಾಡಿ ಎಂದಿಲ್ಲ. ಹಿಂದೂಗಳಿಗೂ ಗೌರವ ನೀಡಲಿ ಎಂದು ಒತ್ತಾಯಿಸಿದರು.ನಾಗಮಂಗಲದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಲ್ಲ ದುಷ್ಕರ್ಮಿಗಳನ್ನು ಬಂಧಿಸುತ್ತೇವೆ, ಮಸೀದಿಯಿಂದ ಪೆಟ್ರೋಲ್ ಬಾಂಬ್, ಮಸೀದಿಯಿಂದ ಲಾಂಗ್, ಮಚ್ಚು ಹಿಡಿದುಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್‌ನವೇ ಹೇಳುತ್ತಿದ್ದಾರೆ. ಗೂಂಡಾಗಿರಿ ಮಾಡಿದ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಧೈರ್ಯವಿಲ್ಲ. ಮನೆಯಲ್ಲಿ ಮಲಗಿರುವ ಹಿಂದೂಗಳನ್ನು ಬಂಧಿಸಲಾಗುತ್ತಿದೆ. ಇದಕ್ಕೆ ಚಾಮುಂಡಿದೇವಿ ಶಾಪ ಕೊಡುತ್ತಾರೆಯೇ ಹೊರತು ರಕ್ಷಣೆ ಮಾಡಲ್ಲ ಎಂದರು.
ಗೃಹ ಸಚಿವ ಪರಮೇಶ್ವರ ಇದೊಂದು ಸಣ್ಣ ಘಟನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.