ಸಾರಾಂಶ
ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಅಂಬೇಡ್ಕರ್ ವೃತ್ತದವರೆಗೆ ಎಸ್‌ಡಿಪಿಐನಿಂದ ಹಮ್ಮಿಕೊಂಡಿದ್ದ ಸಂವಿಧಾನ ವಿರೋಧಿ ವಕ್ಫ್ ಬಿಲ್-2024 ತಿದ್ದುಪಡಿ ಮಸೂದೆ ವಿರುದ್ಧ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಕಂಪ್ಲಿ ತಹಶೀಲ್ದಾರ ಶಿವರಾಜ ಶಿವಪುರಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮುಸ್ಲಿಂ ಧರ್ಮಗುರು ಸೈಯದ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಅಜಂಸಾಹೇಬ್ ಸಜ್ಜಾದೇ ನಶೀನ್ ದಿವಾನಖಾನ ಮಾತನಾಡಿ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ವಕ್ಫ್ ಬಿಲ್-2024 ತಂದಿರುವುದು ಅತ್ಯಂತ ಆತಂಕಕಾರಿ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿಯ ಹಿಡನ್ ಅಜೆಂಡಾವಾಗಿದೆ. ಹಾಲಿ ವಕ್ಫ್ ಕಾಯ್ದೆಗೆ ಸುಮಾರು 40 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೇ ನಾಶಗೊಳಿಸಲು ಈ ವಕ್ಫ್ ಬಿಲ್ ತರಲಾಗಿದೆ. ಇದು ಜಾತ್ಯತೀತ ಮೌಲ್ಯಗಳ ವಿರುದ್ಧವಾಗಿದೆ. ತಾರತಮ್ಯದೊಂದಿಗೆ ಕೂಡಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆಯ ಮೂಲಕ ಈ ಬಿಲ್ ವಿರುದ್ಧ ತನ್ನ ವಿರೋಧ ವ್ಯಕ್ತಪಡಿಸುತ್ತದೆ ಎಂದರು.
ಕಂಪ್ಲಿ ಎಸ್‌ಡಿಪಿಐ ಅಧ್ಯಕ್ಷ ಎಂ.ರಫೀಕ್ ಮಾತನಾಡಿ, ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರ ಕಸಿದುಕೊಳ್ಳುತ್ತಿದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ. ಕಾನೂನು ಉಲ್ಲಂಘನೆಯಾಗಿದೆ. ಹಿಂದೂಗಳಲ್ಲದ ಬೌದ್ಧರು, ಜೈನರು, ಸಿಖ್ಖರಿಗೂ ದೇವಸ್ಥಾನದ ಆಡಳಿತದ ಸದಸ್ಯತ್ವ ನಿಷೇಧಿಸಿರುವುದರಿಂದ ಹಿಂದೂಗಳಿಗೆ ವಕ್ಫ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದೆ ಎಂದರು.ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಗುರುಗಳಾದ ಸೈಯದ್ ಷಾ ಮೈಹಮೂದ ಖಾದ್ರಿ ಉರುಫ್ ರೈಸ್ ಸಾಹೇಬ್ ಸಜ್ಜಾದೇ ನಶೀನ್ ಹಟ್ಟಿ ಸಾಕೀನ್, ಸೈಯದ್ ಷಾ ಅಬುತುರಾಬ್ ಖಾದ್ರಿ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ, ಮುಖಂಡರಾದ ಹಬೀಬ್ ರೆಹಮಾನ್, ಕೆ.ಮೆಹಬೂಬ, ಜಾಫರ್, ಉಸ್ಮಾನ್ ಸೇರಿ ಸಮಾಜದ ಮುಖಂಡರು, ಪದಾಧಿಕಾರಿಗಳು ಇದ್ದರು.