ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯ

| Published : Sep 14 2024, 01:48 AM IST

ಸಾರಾಂಶ

ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗಪಡಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕನ್ನಡಪ್ರಭವಾರ್ತೆ ಹೊಸದುರ್ಗ ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗಪಡಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಪಟ್ಟಣದ ತಾಲೂಕು ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿರಿಧಾನ್ಯಗಳ ಬೇಡಿಕೆ ದೇಶ ವಿದೇಶಗಳಲ್ಲಿ ಹೆಚ್ಚಾಗಿದೆ. 2023ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿ ಸಿರಿಧಾನ್ಯಗಳಿಗೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಸಿರಿಧಾನ್ಯ ಬೆಳೆಗೆ ಕೇಂದ್ರ ಸರ್ಕಾರ 10 ಸಾವಿರ ರು. ಪ್ರೋತ್ಸಾಹ ಧನ ನೀಡುವ ಕೆಲಸ ಮಾಡಿದೆ. ಈ ಪರಿಣಾಮ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ನೀಡುವಂತೆ ಹಾಗೂ ರಾಗಿಯನ್ನು ಸಿರಿಧಾನ್ಯಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಬಿಜೆಪಿಯಿಂದ ಒತ್ತಾಯಿಸಲಾಗುವುದು. ಹಾಗೆಯೇ ರಾಜ್ಯ ಸರ್ಕಾರವೂ ಕೂಡ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ನಿಗಪಡಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರೈತರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೈತರಿಗಿರಲಿ, ಜನಸಾಮಾನ್ಯರಿಗೂ ನಯಾಪೈಸೆ ಪ್ರಯೋಜನ ಆಗಿಲ್ಲ. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆಂಬ ಕುಂಟು ನೆಪ ಹೇಳಿ ಪ್ರತಿನಿತ್ಯ ರಾಜ್ಯದಲ್ಲಿ ಪಡಿತರ ಕಾರ್ಡ್ ರದ್ದು ಮಾಡಲಾಗುತ್ತಿದೆ. ತಾಲೂಕಿನಲ್ಲಿ ಕಳೆದ ನಾಲ್ಕು ದಿನದಲ್ಲಿ 2 ಸಾವಿರ ಕುಟುಂಬಗಳ ಪಡಿತರ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರ ಬಡ ಕುಟುಂಬಗಳ ಪಡಿತರ ಕಾರ್ಡ್ ರದ್ದು ಮಾಡಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್, ಬಿಜೆಪಿ ಮುಖಂಡ ಮಲ್ಲಿಕಾರ್ಜುನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ರೈತ ಮೋರ್ಚಾ ಅಧ್ಯಕ್ಷ ಲಿಂಗರಾಜ್, ಪುರಸಭಾ ಸದಸ್ಯ ದಾಳಿಂಬೆ ಗಿರಿಶ್, ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಗೂಳಿಹಟ್ಟಿ, ಪಂಪ, ಮನು, ಸುಮಂತ್, ಗುರು, ರೈತ ಸಂಘದ ತಾಲೂಕು ಅಧ್ಯಕ್ಷ ಬೋರೇಶ್, ಉಪಾಧ್ಯಕ್ಷ ಚಿತ್ತಪ್ಪ ಮತ್ತಿತರಿದ್ದರು.