ಕನ್ನಡಪ್ರಭ ವಾರ್ತೆ ಪಾಂಡವಪುರ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಬ್ಬಿಣದ ಕಡಲೆಯಂತಿದ್ದ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಕಲಿಸುತ್ತಿದ್ದ ಮೇಷ್ಟ್ರು ಎನ್.ಟಿ.ರಂಗನಾಥನ್ ರಂತಹ ಆದರ್ಶ ಶಿಕ್ಷಕರು ಇರುವುದು ಬಹಳ ವಿರಳ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ರೋಟರಿ ಶಿಕ್ಷಣ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್, ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಎನ್.ಟಿ.ರಂಗನಾಥನ್ ಅವರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ರೋಟರಿ ಎಜುಕೇಷನ್ ಟಸ್ಟ್ ಸ್ಥಾಪಿಸಿ ನಡೆಸುವುದು ಅಷ್ಟು ಸುಲಭವಲ್ಲ. ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳು ಇಂಗ್ಲಿಷ್ ಕಲಿತು ದೊಡ್ಡ ದೊಡ್ಡ ಹುದ್ದೆಗೆ ಹೋಗಬೇಕೆಂಬುದು ನೇರ ನುಡಿಯ ರಂಗನಾಥನ್ ಅವರ ಆಸೆಯಾಗಿತ್ತು. ಅವರಿಂದ ವಿದ್ಯೆ ಪಡೆದ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಬೆಳೆದು ಅತ್ಯುನ್ನತ ಸ್ಥಾನದಲ್ಲಿದ್ದಾರೆ ಎಂದರು.

ನಾನು ಶಾಸಕನಾಗಿದ್ದಾಗ ಪಕ್ಕದಲ್ಲಿರುವ ಜಾಗವನ್ನು ಮಕ್ಕಳಿಗೆ ಆಟವಾಡಲು ಶಾಲೆಗೆ ಬರೆದುಕೊಡಿ ಎಂದು ಮನವಿ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಅವರ ಮಾತನ್ನು ನಡೆಸಿಕೊಡಲಾಗಲಿಲ್ಲ ಎಂದು ವಿಷಾದಿಸಿದರು.


ರಂಗನಾಥನ್‌ರಂತಹ ಆದರ್ಶ ಶಿಕ್ಷಕರು ಇಂದಿನ ದಿನಗಳಲ್ಲಿ ಸಿಗುವುದು ಬಹು ವಿರಳ. ಇನ್ನು ಮುಂದೆ ಅವರ ಹೆಸರಿನಲ್ಲಿ ದತ್ತಿ ಪ್ರಾರಂಭಿಸಿ ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಉಪಯುಕ್ತ ಕಾರ್ಯಕ್ರಮ ಮಾಡಿ ಅವರ ಆದರ್ಶ ಬದುಕಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಅನು ಎನ್.ಆರ್.ರವಿ ಮಾತನಾಡಿ, ರಂಗನಾಥನ್ ಅವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವುದು ಮಾತ್ರವಲ್ಲ, ದೇಶಪ್ರೇಮ, ಗುರು ಹಿರಿಯರಿಗೆ ಗೌರವ ಕೊಡುವುದು, ಸಮಯ ಪ್ರಜ್ಞೆ, ಶಿಸ್ತು, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಸೇರಿದಂತೆ ಉತ್ತಮ ಗುಣಗಳನ್ನು ಹೇಳಿಕೊಡುತ್ತಿದ್ದರು ಎಂದು ಸ್ಮರಿಸಿದರು.

ಬಳಿಕ ಮಹಾಜನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.ಆರ್.ತಿಮ್ಮೇಗೌಡ, ಭೂ ದಾಖಲೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮರಿಸ್ವಾಮಿಗೌಡ, ಪದ್ಮಶ್ರೀ ಪುರಸ್ಕೃತ ಪುಸ್ತಕಪ್ರೇಮಿ ಅಂಕೇಗೌಡರು ಮಾತನಾಡಿದರು. ಈ ವೇಳೆ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್, ಟ್ರಸ್ಟ್ ಅಧ್ಯಕ್ಷ ತಿಮ್ಮೇಗೌಡ, ಡಾ.ಬೋರೇಗೌಡ ಚಿಕ್ಕಮರಳಿ, ಕಾರ್ಯದರ್ಶಿ ಬಂಕ್ ರಮೇಶ್, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಅರಳಕುಪ್ಪೆ ನಾಗರಾಜು, ಎನ್.ಟಿ.ಆರ್.ಕುಟುಂಬದವರಾದ ಉಷಾ, ರೂಪ, ಶ್ರೀನಿವಾಸ್ ಹಾಗೂ ನಿವೃತ್ತ ಕ್ಯಾಫ್ಟನ್ ಎನ್.ಆರ್.ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

----------

17ಕೆಎಂಎನ್ ಡಿ25

ಪಾಂಡವಪುರ ರೋಟರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೇಷ್ಟ್ರು ಎನ್.ಟಿ.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.