ಕನಕಪುರ: ಮಾನವೀಯ ಮೌಲ್ಯಗಳನ್ನು ಬಿತ್ತುವ ಜಾನಪದ ಕಲೆಗಳು ನಮ್ಮೆಲ್ಲರ ಸಾಧನೆಗೆ ಸ್ಫೂರ್ತಿ ನೀಡುತ್ತವೆ ಎಂದು ಕಾಮನ್ ಮ್ಯಾನ್ ಚಲನಚಿತ್ರ ನಿರ್ಮಾಪಕ ನಟ ಡಾ.ಎನ್‌.ನರಸಿಂಹಮೂರ್ತಿ ತಿಳಿಸಿದರು.

ನಗರದ ಆದಿತ್ಯ ಪಿಯು ಮತ್ತು ಪದವಿ ಕಾಲೇಜು ಸಭಾಂಗಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ತರಬೇತಿಗಳಿಲ್ಲದೆ ಅಂತಃಕರಣದಿಂದ ಉದಯಿಸುವುದು ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಇಂದಿನ ವಿದ್ಯಾರ್ಥಿ ಯುವ ಸಮುದಾಯಕ್ಕೆ ಅರ್ಥ ಮಾಡಿಸಬೇಕು. ಮಾನವೀಯ ಮೌಲ್ಯಗಳನ್ನು ತಿಳಿಸುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ಇಂತಹ ಸಂಘ ಸಂಸ್ಥೆಗಳಿಗೆ ಹಾಗೂ ಕಲಾವಿದರಿಗೆ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಮಟೆ ವಾದನ, ಪೂಜಾ ಕುಣಿತ, ಚರ್ಮ ವಾದ್ಯ, ಪಟದ ಕುಣಿತ, ಕೊಂಬು ಕಹಳೆ, ವೀರಗಾಸೆ, ಚಿಲಿಪಿಲಿ ಗೊಂಬೆ ಕಂಸಾಳೆ, ಸೋಮನ ಕುಣಿತ, ಜಾನಪದ ನೃತ್ಯ, ಸೋಬಾನೆ, ರಂಗಗೀತೆ, ಸಮೂಹ ಗಾಯನ ಹಾಗೂ ಕವಿಗೋಷ್ಠಿ ನಡೆಯಿತು.

ಸಾಧಕರಾದ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಾಡೆದೊಡ್ಡಿ ಕಬ್ಬಾಳೇಗೌಡ, ಪ್ರಾಂಶುಪಾಲ ಡಾ.ಸತೀಶ್ , ಯುನಿಟಿ ಲೀಡ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಅನ್ನದಾನಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಭೋಜರಾಜ್, ಪ್ರಾಂಶುಪಾಲ ಡಾ.ಕೆ.ಜಿ. ಸತೀಶ್, ಲಯನ್ ಎ.ಟಿ.ರವಿ,ಪಿ ರೂಪ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರ, ಉಪನ್ಯಾಸಕ ಚಂದ್ರಾಜ್, ಹನಿಯೂರು ಲೋಕೇಶ್, ಹರೀಶ್, ಟ್ರಸ್ಟ್ ಕಾರ್ಯದರ್ಶಿ ಎಂ.ನಾಗೇಶ, ಪಿ.ಪುನೀತ್, ಮರಿಸ್ವಾಮಿ, ಪ್ರೇಮ ಹಾಜರಿದ್ದರು.


ಕೆ ಕೆ ಪಿ ಸುದ್ದಿ 01:

ಕನಕಪುರದ ಆದಿತ್ಯ ಕಾಲೇಜಿನಲ್ಲಿ ರಾಜ್ಯ ಮಟ್ಟದ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.