ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಜಾಪ್ರಭುತ್ವ ಉಳಿಯಬೇಕಾದರೆ ಚುನಾವಣೆಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.ದಾರಿ ಫೌಂಡೇಷನ್ ವತಿಯಿಂದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ’ ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ಲೋಕಸಭೆವರೆಗೆ ಯೋಗ್ಯರೇ ಆಯ್ಕೆಯಾಗಬೇಕು. ಯಾವುದೇ ರಾಜಕೀಯ ಪಕ್ಷದವರು ಯೋಗ್ಯರಿಗೆ ಟಿಕೆಟ್ ನೀಡಲಿಲ್ಲ ಎಂದರೇ ಸ್ಥಳೀಯರೇ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಬೇಕು. ಮತದಾನ ಕಡ್ಡಾಯ ಮಾಡಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬೇಕು ಎಂದು ಸಲಹೆ ಮಾಡಿದರು.
ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವೇ ಇಂದಿನ ಸಂಸತ್ತು ಎಂದು ಹೇಳುತ್ತೇವೆ. ಆದರೆ ಬಸವಣ್ಣನವರು ಹೇಳಿದ್ದ ಕಲಬೇಡ, ಕೊಲಬೇಡ,. ಹುಸಿಯ ನುಡಿಯಲು ಬೇಡ.. ಈ ವಚನದ ಎಲ್ಲಾ ಸಾಲುಗಳನ್ನು ಅನುಸರಿಸಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿ ನಡೆಯುತ್ತಿದೆ. ಇಡಿ, ಸಿಬಿಐ, ಚುನಾವಣಾ ಆಯೋಗದ ದುರುಪಯೋಗ ನಡೆಯುತ್ತಿದೆ. ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಅವರು ವಿಷಾದಿಸಿದರು.ಜಾತಿ ಗಣತಿಗೆ ವಿರೋಧ ಸರಿಯಲ್ಲ:
ದೇಶದಲ್ಲಿ ಸಾವಿರಾರು ಜಾತಿಗಳಿವೆ. ಹೀಗಿರುವಾಗ ಸಮಾನತೆ ತರಬೇಕಾದರೆ ಯಾವ್ಯಾವ ಜಾತಿಯವರು ಎಷ್ಟೆಷ್ಟು ಇದ್ದಾರೆ ಎಂಬುದನ್ನು ಪತ್ತೆ ಮಾಡಿ, ಅದರ ಪ್ರಕಾರ ಸೌಲಭ್ಯ ಕಲ್ಪಿಸಬೇಕಾಗಿದೆ. ಹೀಗಾಗಿ ಜಾತಿ ಗಣತಿಯನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.ಮುಖ್ಯಅತಿಥಿಯಾಗಿದ್ದ ವಕೀಲರು ಹಾಗೂ ನೋಟರಿ ಎಂ.ಎನ್. ಸುಮನಾ ಮಾತನಾಡಿ, ಪ್ರತಿಯೊಬ್ಬರಿಗೂ ಮಹಾತ್ಮಗಾಂಧೀಜಿ ಅವರ ಅಹಿಂಸೆ, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಬಸವಣ್ಣನವರ ಮಾನವ ಧರ್ಮ ಮುಖ್ಯವಾಗಬೇಕು ಎಂದರು.
ಮತ್ತೊರ್ವ ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೈಸೂರಿನಲ್ಲಿ ಸುಮಾರು 400 ಕೋಟಿ ರು.ಗಳಷ್ಟು ಮಾದಕವಸ್ತುವನ್ನು ಮಹಾರಾಷ್ಟ್ರ ಪೊಲೀಸರು ಬಂದು ವಶಪಡಿಸಿಕೊಂಡಿದ್ದಾರೆ. ಮೈಸೂರಿನಲ್ಲಿಯೂ ಕೂಡ ಮಾದಕವಸ್ತುಗಳ ಬಳಕೆ ಇರಬಹುದು,. ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸಬೇಕು ಎಂದರು.ಅತಿಥಿಯಾಗಿದ್ದ ಮೈವಿವಿ ಸಿಂಡಿಕೇಟ್ ಸದಸ್ಯ ಶಂಕರ್ ಎಂ. ಹುಯಿಲಾಳು ಮಾತನಾಡಿ, ಶತಮಾನೋತ್ಸವ ಹೊಸ್ತಿಲಲ್ಲಿ ಇರುವ ಯುವರಾಜ ಕಾಲೇಜಿನಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಸಂಬಂಧ ಕುಲಪತಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್, ದಾರಿ ಫೌಂಡೇಷನ್ ಅಧ್ಯಕ್ಷ ಎಲ್. ರಂಗಯ್ಯ, ಖಜಾಂಚಿ ವಿಶ್ವನಾಥ್ ಕುಲಕರ್ಣಿ, ಸಂಚಾಲಕ ಪ್ರಭಾಕರ್ ಇದ್ದರು. ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಹಾಮನೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ ವಂದಿಸಿದರು. ಸುಮನ್ ತಂಡದವರು ನಾಡಗೀತೆ ಹಾಡಿದರು.ಸಿಜೆಐಗೆ ಶೂ ಎಸೆತ- ಸುಮೊಟೋ ಪ್ರಕರಣ ದಾಖಲಿಸಿ ಶಿಕ್ಷಿಸಲು ಮುಖ್ಯಮಂತ್ರಿ ಚಂದ್ರು ಆಗ್ರಹಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ವಕೀಲ ಕಿಶೋರ್ ಶೂ ಎಸೆತ ಪ್ರಕರಣವನ್ನು ಕ್ಷಮಿಸಬಾರದು. ಈ ಬಗ್ಗೆ ಸುಮೊಟೋ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು. ಈ ಪ್ರಕರಣ ಖಂಡನೀಯ. ಈ ರೀತಿಯ ಘಟನೆಯಗಳು ನಡೆಯಬಾರದು ಎಂದು ಅವರು ಹೇಳಿದರು.ಬಿಗ್ ಬಾಸ್ ಬಂದ್ ವಿಚಾರದಲ್ಲೂ ರಾಜಕೀಯ ಬೇಕಿರಲಿಲ್ಲ
ಬಿಗ್ ಬಸ್ ಬಂದ್ ಮಾಡುವ ವಿಚಾರದಲ್ಲಿ ರಾಜಕಾರಣ ಬೇಕಿರಲಿಲ್ಲ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು. ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ಆ ಸ್ಟುಡಿಯೋ ಮಾಲೀಕನ ವಿರುದ್ಧ ಕ್ರಮ ಜರುಗಿಸಬೇಕೆ ಹೊರತು ಇನ್ನಾರದೋ ನಟ್ಟು- ಬೊಲ್ಟು ಟೈಟ್ ಮಾಡಲು ಹೋಗಬಾರದಿತ್ತು ಎಂದು ಮಾರ್ಮಿಕವಾಗಿ ಹೇಳಿದರು.ಅದೇ ರೀತಿ ಯಾವುದೇ ಪ್ರಕರಣದಲ್ಲಿ ಜೇಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಾಗ ಹಾರ- ತುರಾಯಿ ಹಾಕಿ ಸ್ವಾಗತಿಸಬಾರದು ಎಂದರು.