ಮೈಸೂರಿನಲ್ಲಿ ಆಡಳಿತಯಂತ್ರ ಸಂಪೂರ್ಣ ವಿಫಲ: ಯದುವೀರ್

| Published : Oct 11 2025, 12:02 AM IST

ಸಾರಾಂಶ

ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಗಿದೆ. ಮತ್ತೆ ಚಿಕ್ಕ ಮಗುವಿನ ಮೇಲೆ ಅತ್ಯಾಚಾರ ಕೊಲೆಯಾಗಿದೆ. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ?.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ಆಡಳಿತಯಂತ್ರ ಸಂಪೂರ್ಣ ವಿಫಲವಾಗಿದೆ. ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲದಂತಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ನಗರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ತಮ್ಮ ತವರೂರಿನ ವಿಚಾರದಲ್ಲಿ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಮೈಸೂರಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಮೈಸೂರಿನ ಹೆಸರು ಕೆಡುತ್ತಿದೆ ಎಂದು ದೂರಿದರು.

ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಗಿದೆ. ಮತ್ತೆ ಚಿಕ್ಕ ಮಗುವಿನ ಮೇಲೆ ಅತ್ಯಾಚಾರ ಕೊಲೆಯಾಗಿದೆ. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ? ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಅಂತಾರೆ. ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

ದಸರಾ ಪಾಸ್ ಅವ್ಯವಸ್ಥೆ:

ದಸರಾ ಬರೀ ಅವ್ಯವಸ್ಥೆಯಲ್ಲಿ ನಡೆಯಿತು. ಪಾರದರ್ಶಕವಾಗಿ ದಸರಾ ಪಾಸ್ ನೀಡಿಲ್ಲ. ದಸರಾ ಪಾಸ್ ಬದಲು ಸಂಪೂರ್ಣ ಟಿಕೆಟ್ ಮಾಡಿ ಎಂದು ಹೇಳಿದ್ದೇವು. ಇದು ಪ್ರಭಾವಿಗಳ ದಸರಾ ಆಯ್ತು. ಕಾಂಗ್ರೆಸ್ ನ ಪ್ರಮುಖರು, ಅವರ ಮನೆಯವರಿಗೆ ದಸರಾ ಆಯ್ತು. ಕಾಂಗ್ರೆಸ್ ದರ್ಬಾರ್ ದಸರಾ ನಡೆಯಿತು ಎಂದು ಅವರು ದೂರಿದರು.

ದಸರಾ ಪಾಸ್ ವಿಚಾರದಲ್ಲಿ ಗೊಂದಲ ಆಯಿತು. ಆಸನ ವ್ಯವಸ್ಥೆ ಕಡಿಮೆ ಮಾಡಿ ಪಾಸ್ ಹೆಚ್ಚು ಕೊಟ್ಟರು. ಪಾಸ್ ಇರೋರಿಗೂ ಅರಮನೆ ಒಳಗಡೆ ಬಿಡಲಿಲ್ಲ. ಇದು ಕೇವಲ ಕಾಂಗ್ರೆಸ್ ನಾಯಕರ ದಸರಾ ಆಯಿತು. ಜನ ಸಾಮಾನ್ಯರ ದಸರಾ ಆಗಲಿಲ್ಲ. ನಾಗರಿಕರಿಗೆ ಅನುಕೂಲ ಮಾಡಲಿಲ್ಲ. ಕೇವಲ ಉಳ್ಳವರ ದಸರಾ ದರ್ಬಾರ್ ಆಯಿತು ಎಂದು ಅವರು ವಾಗ್ದಾಳಿ ನಡೆಸಿದರು.

ಪಾಲಿಕೆ ಚುನಾವಣೆಗೆ ಆಗ್ರಹ:

ಸ್ಥಳೀಯ ಪ್ರಜಾಪ್ರಭುತ್ವವೇ ನಾಶವಾಗಿದೆ‌. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯೂ ನಡೆದಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಅನ್ಯಾಯ ಆಗಿದೆ. ಪಾಲಿಕೆ ಚುನಾವಣೆ ನಡೆಸದೆ ಸರ್ಕಾರ ಕುಳಿತಿದೆ. ಕೇಂದ್ರದಿಂದ ಬಂದ ಹಣ ವಾಪಸ್ ಹೋಗಿದೆ. ಈ ರೀತಿ ಆದರೆ ಮೈಸೂರು ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಯಾವಾಗಲೂ ಸಂವಿಧಾನ ಸಂವಿಧಾನ ಅಂತ ಹೇಳುತ್ತಾರೆ. ಆದರೆ, ಸಂವಿಧಾನದ ಪ್ರಕಾರ ಆಡಳಿತ ಮಾಡುತ್ತಿಲ್ಲ. ಪಾಲಿಕೆ ಚುನಾವಣೆ ಶೀಘ್ರವೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟಕ್ಕೆ ಧುಮುಕುತ್ತದೆ ಎಂದು ಅವರು ಎಚ್ಚರಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್. ರಘು, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಬಿ.ಎಂ. ರಘು, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಬಿ.ಎಂ. ಸಂತೋಷ್ ಕುಮಾರ್ ಇದ್ದರು.

ಸಿಎಂಗೆ ಚುನಾವಣೆ ಸಮಯದಲ್ಲಿ ಮಾತ್ರ ತವರು ನೆನಪಾಗುತ್ತದೆ. ಅಧಿಕಾರಕ್ಕೆ ಬಂದ ನಂತರ ತವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಕಾನೂನು ಸುವ್ಯವಸ್ಥೆ ಸರಿಯಾದ ರೀತಿ ಕರ್ತವ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು. ಆ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತೇವೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.

- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು