ರಾಜ್ಯ ಪೊಲೀಸರಿಗೆ ದಕ್ಷತೆ ಇದೆ, ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ: ಪ್ರತಾಪ್ ಸಿಂಹ

| Published : Oct 11 2025, 12:02 AM IST

ರಾಜ್ಯ ಪೊಲೀಸರಿಗೆ ದಕ್ಷತೆ ಇದೆ, ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ: ಪ್ರತಾಪ್ ಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಕೂಗು ಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಡೋನಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಬಾಲಕಿ ಕೊಲೆ ಪ್ರಕರಣ ಬಗ್ಗೆ ಯಾಕೆ ಮಾತಾಡಲ್ಲ?, ಪ್ರಿಯಾಂಕ್ ಖರ್ಗೆ, ಲಾಡ್, ಚಿಕ್ಕಬಳ್ಳಾಪುರದ ಕೂಗು ಮಾರಿ ಇವರಲ್ಲಿ ಒಬ್ಬನಾದರೂ ಬಾಯಿ ತೆರೆಯುತ್ತಿದ್ದಾನಾ? ಸಿಎಂ, ಡಿಸಿಎಂ ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ?.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಪೊಲೀಸರಿಗೆ ದಕ್ಷತೆ ಇದೆ. ಆದರೆ, ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ. ನಳಪಾಕ್ ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೆ ಪೊಲೀಸರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಾಗ್ತಿದೆ ಮೈಸೂರಿನಲ್ಲಿ? ಒಂದರ ಹಿಂದೆ ಒಂದು ಕೊಲೆಗಳು ಆಗ್ತಿವೆ. ಬಾಲಕಿ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಸರ್ಕಾರದ ಯಾರೊಬ್ಬರು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಕೂಗು ಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಡೋನಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಬಾಲಕಿ ಕೊಲೆ ಪ್ರಕರಣ ಬಗ್ಗೆ ಯಾಕೆ ಮಾತಾಡಲ್ಲ?, ಪ್ರಿಯಾಂಕ್ ಖರ್ಗೆ, ಲಾಡ್, ಚಿಕ್ಕಬಳ್ಳಾಪುರದ ಕೂಗು ಮಾರಿ ಇವರಲ್ಲಿ ಒಬ್ಬನಾದರೂ ಬಾಯಿ ತೆರೆಯುತ್ತಿದ್ದಾನಾ? ಸಿಎಂ, ಡಿಸಿಎಂ ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ? ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ನೀವು ಸಿಎಂ ಆಗಿದ್ದೀರಾ ಎಂದು ಕಿಡಿಕಾರಿದರು.

ಮಹದೇವಪ್ಪ ಬರೀ ಸಂವಿಧಾನ ಪೀಠಿಕೆ ಓದಿಸೋದು ಬಿಟ್ಟರೆ ಬೇರೆ ಏನೂ ಮಾಡುತ್ತಿದ್ದಾರೆ?, ಹಕ್ಕಿಪಿಕ್ಕಿ ಜನಾಂಗದ ಬಾಲಕಿ ಕೊಲೆಗೆ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲ? ಸಿಎಂಗೆ ಅಂತಃಕಾರಣವೇ ಇಲ್ಲ. ಸಿಎಂ ಹೃದಯ ಕಲ್ಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸುದೀಪ್ ಮೇಲಿನ ದ್ವೇಷಕ್ಕೆ ಬಿಗ್ ಬಾಸ್ ಬಾಗಿಲು ಹಾಕಿಸಲಾಗಿದೆ‌. ಇದು ದೌರ್ಜನ್ಯ ಸರ್ಕಾರ. ನಾನು ರಾಜ್ಯ ರಾಜಕಾರಣದಲ್ಲೆ ಇದ್ದೀನಿ. ಲೋಕಸಭೆಯಲ್ಲಿ ಟಿಕೆಟ್ ಕೊಡದವರಿಗೆ ವಿಧಾನಸಭೆ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರು ಡಿಸಿಎಂ ಕೂಡ ಆಗಿದ್ದಾರೆ.

- ಪ್ರತಾಪ್ ಸಿಂಹ, ಮಾಜಿ ಸಂಸದರು

ಕಂದಮ್ಮನ ನರಮೇಧ: ಮಾನವೀಯತೆಯ ನಾಚಿಕೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಹಿನ್ನೆಲೆಯಲ್ಲಿ ಹೊಟ್ಟೆಪಾಡಿಗಾಗಿ ಬಲೂನು ಮಾರಲು ಬಂದ ಕುಟುಂಬವೊಂದರ ಚಿಕ್ಕ ಮಗುವನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಖಂಡನೀಯ ಎಂದು ನಿವೃತ್ತ ಪ್ರಾಂಶುಪಾಲ ಕಾಡ್ನೂರು ಶಿವೇಗೌಡ ತಿಳಿಸಿದ್ದಾರೆ.

ಆ ನಿರಪರಾಧ ಕಂದಮ್ಮನ ಕನಸುಗಳು , ಮೃಗೀಯ ವಿಕೃತಿಯ ವ್ಯಕ್ತಿ ಕೃತ್ಯದಿಂದ ಮಧ್ಯರಾತ್ರಿ ಕ್ಷಣಾರ್ಧದಲ್ಲಿ ನಾಶವಾದವು. ಅಪರಿಚಿತನೊಬ್ಬ, ಪ್ರಾಣಿಯೂ ನಾಚುವಂತ ಕ್ರೂರ ಮನಸ್ಸಿನಿಂದ, ಆ ಪುಟ್ಟ ಮಗುವನ್ನು ತಂದೆತಾಯಿಯ ಪಕ್ಕದಿಂದ ಎಳೆದುಕೊಂಡು ಹೋಗಿ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಈ ಸುದ್ದಿ ಕೇಳಿದ ಕ್ಷಣದಿಂದಲೇ, ಮನುಷ್ಯನಲ್ಲಿರುವ ಮಾನವೀಯತೆ ಎಂಬ ಪದವೇ ನಾಚಿದೆ. ಈ ಕೃತ್ಯವು ಕೇವಲ ಒಂದು ಕುಟುಂಬದ ನೋವಲ್ಲ , ಇದು ಇಡೀ ಸಮಾಜದ ತಲೆತಗ್ಗಿಸುವ ಘಟನೆ ಎಂದು ಅವರು ತಿಳಿಸಿದ್ದಾರೆ.

ಯಾವ ಸಮಾಜದಲ್ಲಿ ಮಕ್ಕಳಿಗೂ ಸುರಕ್ಷತೆ ಇಲ್ಲವೋ, ಆ ಸಮಾಜಕ್ಕೆ ಅಭಿವೃದ್ಧಿಯ ಅರ್ಥವೇನು? ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ ಎಲ್ಲವೂ ಬೆಳೆದರೂ, ಮನುಷ್ಯನ ಮನಸ್ಸು ಕತ್ತಲೆಯ ಅಂಧಕಾರದಲ್ಲಿ ಕುಸಿದುಬಿದ್ದಿದೆ. ಇಂತಹ ಕೃತ್ಯಗಳು ಕಾನೂನು ಮತ್ತು ನೀತಿಯ ಮೇಲಿನ ನಂಬಿಕೆಯನ್ನು ಕಂಪಿಸುತ್ತದೆ.

ಇದು ಕೇವಲ ಒಂದು ಪ್ರಕರಣವಲ್ಲ; ನಮ್ಮ ವ್ಯವಸ್ಥೆಯ ದೌರ್ಬಲ್ಯವನ್ನೇ ಬಯಲಿಗೆಳೆದಿದೆ. ರಾತ್ರಿ ಪಹರೆ, ಪೊಲೀಸ್ ಪೆಟ್ರೋಲ್, ಕಾನೂನು ಕ್ರಮ, ಎಲ್ಲವೂ ಇದ್ದರೂ, ಇಂತಹ ಅಪರಾಧಿಗಳು ಹೇಗೆ ಇಷ್ಟೊಂದು ಧೈರ್ಯ ತೋರುತ್ತಾರೆ? ಶಿಕ್ಷೆಯ ಭಯ ಕಳೆದುಕೊಂಡ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕೊಚ್ಚಿಹೋಗಿವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಆರ್‌.ರಘು ವಿಷಾದ:

ದಸರೆಗೆ ಬಲೂನಿನ ಬಣ್ಣ ತುಂಬಲು ಬಂದು ಬದುಕು ಬರಡಾಗಿಸಿಕೊಂಡ ಅಲೆಮಾರಿ ಕುಟುಂಬ, ಆಟ-ಪಾಠದಲ್ಲಿ ಬಾಲ್ಯ ಕಳೆಯಬೇಕಿದ್ದ ಹತ್ತರ ಬಾಲೆ ಮೈಸೂರಿನಲ್ಲಿ ಭಯಾನಕ ಸ್ಥಿತಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಬರ್ಬರ ಕೊಲೆಯಾಗಿರುವ ವರದಿ ನಾಗರಿಕ ಸಮಾಜ ತಲೆತಗ್ಗಿಸುವ ಅಮಾನುಷ ದುರಂತ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್‌. ರಘು ವಿಷಾದಿಸಿದ್ದಾರೆ.

ಶಾಂತಿ, ಸುವ್ಯವಸ್ಥೆಯ ಸುರಕ್ಷಿತ ನಗರವೆಂದು ಖ್ಯಾತಿ ಪಡೆದಿದ್ದ ಮೈಸೂರು ನಗರದ ಒಡಲಲ್ಲಿ ಇತ್ತೀಚೆಗೆ ಡ್ರಗ್ಸ್‌ ಫ್ಯಾಕ್ಟರಿ ಕಾರ್ಯನಿರ್ವಹಿಸಿಸುತ್ತಿತ್ತು ಎಂಬ ಆಘಾತಕಾರಿ ಸುದ್ದಿ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆನಂತರ ಒಂದರ ಮೇಲೊಂದರಂತೆ ಕೊಲೆ- ಸುಲಿಗೆಯ ವರದಿಗಳು ಪ್ರಕಟವಾಗುತ್ತಿದೆ. ಮೊನ್ನೆಯಷ್ಟೇ ವಸ್ತುಪ್ರದರ್ಶನ ಮೈದಾನದ ಬಳಿ ಯುವಕನೊಬ್ಬನ ಕೊಲೆಯಾದ ಸ್ಥಳದಲ್ಲೇ 10 ವರ್ಷದ ಹೆಣ್ಣುಮಗುವಿನ ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆಗೈದ ಘಟನೆ ಅತ್ಯಂತ ಹೇಯ ಹಾಗೂ ಮಾನವೀಯ ಹೃದಯವನ್ನು ಕಲಕುತ್ತಿದೆ. ಇದು ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿರುವುದನ್ನು ಪ್ರತಿಬಿಂಬಿಸುತ್ತಿದೆ.

ಸ್ವತಃ ಮುಖ್ಯಮಂತ್ರಿಗಳ ತವರು ಜಿಲೆಯಲ್ಲಿ ಈ ಪರಿಯ ಕೊಲೆ, ಸುಲಿಗೆ, ಹಸುಳೆಗಳ ಮೇಲೆ ಪೈಚಾಶಿಕ ಕೃತ್ಯ ಎಸಗುತ್ತಿರುವುದು ನಾಚಿಕೆಗೇಡಿನ ಪರಮಾವಧಿ. ಕೂಡಲೇ ಸರ್ಕಾರ ಮೈಸೂರಿನ ಪೋಲೀಸ್ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಕಾನೂನು ಬಿಗಿಗೊಳಿಸಬೇಕು. ಘಟನೆ ಸಂಬಂಧ

ದುರುಳನೊಬ್ಬನ ಬಂಧನ ಹಾಗೂ ಆತನಮೇಲೆ ಗುಂಡು ಹಾರಿಸಿರುವ ಪೊಲೀಸರ ಕ್ರಮ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಬಾಲಕಿ ಮೇಲಿನ ಕ್ರೌರ್ಯಕ್ಕೆ ಬೆಚ್ಚಿಬಿದ್ದಿರುವ ಜನರು ಹಾಗೂ ಸಂಘ ಸಂಸ್ಥೆಗಳ ಆಕ್ರೋಶ ತಣ್ಣಗಾಗಿಸಲು ಪೊಲೀಸರು ಪ್ರಕರಣ ತಣ್ಣಗಾಗಿಸಲು ಕಥೆ ಹೆಣೆಯುತ್ತಿದ್ದಾರೆ ಎಂಬ ಮಾತು ಜನ ವಲಯದಲ್ಲಿ ಕೇಳಿಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.