ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿರವರು ಬೇನಾಮಿ ಆಸ್ತಿ ಮಾಡಿದ್ದರೆ ಕಾಂಗ್ರೆಸ್ ಸರ್ಕಾರ ತನಿಖೆ ಮಾಡಿಸಿ ಸತ್ಯಾಂಶ ಬಹಿರಂಗ ಪಡಿಸಲಿ ನೋಡೋಣ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಬೇನಾಮಿ ಆಸ್ತಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂಬುದರಲ್ಲಿ ಅರ್ಥ ಇಲ್ಲ. ಬೇನಾಮಿ ಆಸ್ತಿ ಇದ್ದರೆ ಅವರದ್ದೇ ಸರ್ಕಾರ ಇದೆಯಲ್ಲ, ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.2006ರಲ್ಲಿ ಕುಮಾರಸ್ವಾಮಿರವರು ಟೌನ್ ಶಿಪ್ ಯೋಜನೆ ಕೈಗೆತ್ತಿಕೊಂಡ ಮೇಲೆ ಬಾಲಕೃಷ್ಣ ಎರಡು ಬಾರಿ ಶಾಸಕರಾಗಿದ್ದರು. ಇಷ್ಟು ವರ್ಷ ಅವರು ಧ್ವನಿ ಎತ್ತದೆ ಕಡಲೆಪುರಿ ತಿನ್ನುತ್ತಿದ್ದಿರ. ನಾನು ಶಾಸಕನಾಗಿ 5 ವರ್ಷ ಏನು ಮಾಡಿದ್ದೇನೆಂದು ದಾಖಲೆ ಕೊಡುತ್ತೇನೆ. ನಾವು ರೈತರ ಪರ ಹೋರಾಟ ಮಾಡುತ್ತಿದ್ದೇವೆಯೇ ಹೊರತು ರಾಜಕೀಯ ಮಾಡುತ್ತಿಲ್ಲ ಎಂದರು.
ಕುಮಾರಸ್ವಾಮಿರವರು ನೋಟಿಫಿಕೇಷನ್ ಮಾಡಿಯೇ ಇಲ್ಲ. ಹೀಗಿರುವಾಗ ಡಿ ನೋಟಿಫಿಕೇಷನ್ ಹೇಗೆ ಮಾಡುತ್ತಾರೆ. ಅವರಿಗೆ ಧೈರ್ಯವಿದ್ದರೆ ಕುಮಾರಸ್ವಾಮಿರವರ ನೋಟಿಫಿಕೇಷನ್ ಹೊರಡಿಸಿರುವ ಪ್ರತಿ ಮತ್ತುಶೇಕಡ 80ರಷ್ಟು ರೈತರು ಒಪ್ಪಿರುವುದನ್ನು ಸಾಬೀತು ಪಡಿಸಿದರೆ ಇಂದೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಾಲಕೃಷ್ಣರಿಗೆ ಸವಾಲು ಹಾಕಿದರು.
ಆ ಪ್ರದೇಶ ರೆಡ್ ಜೋನ್ ನಲ್ಲಿ ಇದ್ದಾಗಲೂ ಭೂಮಿ ಮಾರಾಟವಾಗಿದೆ. ಆದರೆ, ಮುಖ್ಯಮಂತ್ರಿಗಳು ಕಡಿಮೆ ಬೆಲೆ ಜಮೀನಿಗೆ ಹೆಚ್ಚು ಬೆಲೆ ನೀಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಅವರೇ ಹೇಳಿದಂತೆ ನಾನು ರಿಯಲ್ ಎಸ್ಟೇಟ್ ಉದ್ಯಮಿ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಸರ್ಕಾರ ಎಕರೆಗೆ 2 ಕೋಟಿ ದರ ನಿಗದಿ ಮಾಡಿದೆ. ನಾನು ಎಕರೆಗೆ 3 ಕೋಟಿ ಕೊಡುತ್ತೇನೆ ಜಮೀನು ಕೊಡಿಸಲಿ. ನನ್ನ ಬಳಿಯೂ ಡವಲಪರ್ಸ್ ಗಳಿದ್ದು, ಅವರ ಮುಖೇನ ಸಾವಿರಾರು ಎಕರೆ ಖರೀದಿ ಮಾಡಿಸುತ್ತೇನೆ. ಜಮೀನು ಕೊಡಿಸಲಿ ನೋಡೋಣ ಎಂದು ಕೇಳಿದರು.
ಹೋರಾಟ ಮಾಡಿದ್ದರೆ ದಾಖಲೆ ತೋರಿಸಲಿ :
ಟೌನ್ ಶಿಪ್ ಯೋಜನೆ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅವರಿಗೆ ಬಾಲಕೃಷ್ಣ ರೈಡ್ ಹ್ಯಾಂಡ್ ಆಗಿದ್ದರು. ಅಲ್ಲದೆ, 2008ರಿಂದ 2013 ಹಾಗೂ 2013 ರಿಂದ 2018ರವರೆಗೆ ಶಾಸಕರಾಗಿದ್ದರು. ಈ ಅವಧಿಯಲ್ಲಿ ಅಧಿವೇಶನದಲ್ಲಿ ರೈತರ ಪರವಾಗಿ ಮಾತನಾಡಿರುವ ಅಥವಾ ಬೀದಿಯಲ್ಲಿ ಹೋರಾಟ ಮಾಡಿರುವ ದಾಖಲೆ ತೋರಿಸಲಿ ಎಂದರು.ಎಸ್ ಬಿಆರ್ ತಿಮ್ಮೇಗೌಡರು ರಾಜ್ಯಸರ್ಕಾರಕ್ಕೆ 650 ಕೋಟಿ ರುಪಾಯಿ ಹಣ ಕಟ್ಟಬೇಕಿತ್ತು. ಅವರೇ ಜಮೀನನ್ನು ಕೆಐಎಡಿಬಿಯಿಂದ ಸ್ವಾಧೀನ ಪಡಿಸಿಕೊಂಡು ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದರು. ಅದರಂತೆ ಸರ್ಕಾರ ಕೆಐ ಎಡಿಬಿ ಮೂಲಕ ಭೂ ಸ್ವಾಧೀನ ಮಾಡಿಕೊಂಡು ಹಣ ಪಡೆದಕೊಂಡಿತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಆಗ ತಿಮ್ಮೇಗೌಡರ ಬಳಿ ದೊಡ್ಡು ಹೊಡೆಯಲು ಬಾಲಕೃಷ್ಣ ಬಂದಿದ್ದರು. ಆನಂತರ ಏನು ಹೋರಾಟ ಮಾಡಿದ್ದಾರೆ ಹೇಳಲಿ ಎಂದು ಪ್ರಶ್ನಿಸಿದರು.
ಭೂ ಪರಿಹಾರ ಕೊಡಲು ಪ್ರಾಧಿಕಾರದ ಬಳಿ ಹಣವೇ ಇಲ್ಲ. ಸರ್ಕಾರ ಬದಲಾವಣೆಯಾಗಿ ಯೋಜನೆ ಕೈ ಬಿಡುತ್ತೇವೆ ಅಥವಾ ಯೋಜನೆ ರೂಪ ಬದಲಾಯಿಸುತ್ತೇವೆ ಎಂದಾಗ ರೈತರ ಪಾಡು ಏನಾಗಬೇಕು.ಇಂಟಿಗ್ರೇಟಟ್ ಟೌನ್ ಶಿಪ್ ಮಾಡುವುದಾಗಿದ್ದರೆ ಒಂದೇ ಬಾರಿಗೆ ಅಂತಿಮ ಅಧಿಸೂಚನೆ ಹೊರಡಿಸ ಬಹುತಾಗಿತ್ತು. ಪ್ರತ್ಯೇಕವಾಗಿ ಅಧಿಸೂಚನೆ ಏಕೆ ಹೊರಡಿಸುತ್ತಿದ್ದಾರೆ. ರೈತರಿಗೆ ಮೋಸ ಮಾಡುವ ಉದ್ದೇಶ ಇಲ್ಲದೆ ಮತ್ತೇನು ಎಂದು ಎ.ಮಂಜುನಾಥ್ ಪ್ರಶ್ನೆ ಮಾಡಿದರು.
