ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಕೆಇಆರ್.ಸಿ ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪಟ್ಟಣದ ಸೆಸ್ಕ್ ಕಚೇರಿ ಎದುರು ಶುಕ್ರವಾರ ಕೆಪಿಟಿಸಿಎಲ್ ನೌಕರರು, ವಿದ್ಯುತ್ ಗುತ್ತಿಗೆದಾರರು, ನಿವೃತ್ತ ನೌಕರರು ಹಾಗೂ ಎಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸಾಂಕೇತಿಕ ಪ್ರತಿಭಟಿಸಲಾಯಿತು.ಸೆಸ್ಕ್ ಕಚೇರಿ ಎದುರು ವಿವಿಧ ವಿಭಾಗಗಳ ನೌಕರರು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಇಇ ವೀರೇಶ್ ಮಾತನಾಡಿ, ಟಾಟಾ ಪವರ್ ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಯಾಗಿದೆ. ವಿದ್ಯುತ್ ಕ್ಷೇತ್ರವು ಸೇವಾ ಕ್ಷೇತ್ರವಾಗಿದ್ದು, ಪ್ಯಾರಲೈಸೇಷನ್ ಹೆಸರಿನಲ್ಲಿ ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಖಾಸಗಿ ಸಂಸ್ಥೆಗಳಿಂದ ಸಾರ್ವಜನಿಕ ಸೇವೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಿಲ್ಲ. ಸರ್ಕಾರದ ಗೃಹಜ್ಯೋತಿ, ಭಾಗ್ಯಜ್ಯೋತಿ ಸೇರಿದಂತೆ ಹಲವು ಸಬ್ಸಿಡಿ ಯೋಜನೆಗಳ ಮೂಲಕ ರೈತರು ಹಾಗೂ ಸಾರ್ವಜನಿಕರಿಗೆ ನೆರವು ನೀಡಲಾಗುತ್ತಿದೆ. ಖಾಸಗೀಕರಣವಾದರೆ ಸಬ್ಸಿಡಿ ಹೊಣೆ ಸರ್ಕಾರದ ಮೇಲೆಯೇ ಉಳಿದು, ಆದಾಯ ತರುವ ಯೋಜನೆಗಳನ್ನು ಖಾಸಗಿ ಸಂಸ್ಥೆಗಳು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಿ ವಿದ್ಯುತ್ ಸಂಸ್ಥೆಗಳು ದುರ್ಬಲಗೊಂಡು ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೆಗಳಿಗೆ ತೀವ್ರ ತೊಂದರೆಯಾಗಲಿದೆ, ಹಾಗಾಗಿ ಆಕ್ಷೇಪಣೆ ಸಲ್ಲಿಸಲು ನೀಡಿರುವ ಗಡುವಿನೊಳಗೆ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಮೂಲಕ ಆನ್ ಲೈನ್ ನಲ್ಲಿ ಆಕ್ಷೇಪಣೆ ಸಲ್ಲಿಸಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.ಟಾಟಾ ಪವರ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಜೂ. 23ರವರೆಗೆ ಅವಕಾಶ ನೀಡಲಾಗಿದೆ. ಖಾಸಗೀಕರಣದ ವಿರುದ್ಧ ಪ್ರಾಥಮಿಕ ಸಮಿತಿ, ಸ್ಥಳೀಯ ಸಮಿತಿ ಹಾಗೂ ಕೇಂದ್ರ ಸಮಿತಿಗಳ ಮೂಲಕ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಜೂ. 23ರ ಬಳಿಕ ಸರ್ಕಾರವು ಹಾಗೂ ಕೆಇಆರ್‌ಸಿ ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ಟಾಟಾ ಪವರ್ ಅರ್ಜಿಯನ್ನು ತಿರಸ್ಕರಿಸಿದರೆ ಅಭಿನಂದಿಸಲಾಗುವುದು. ಇಲ್ಲದಿದ್ದರೆ ಸಂಘಟನೆಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಕುಟುಂಬ ಸಮೇತ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಮನೋಜ್, ನಿರ್ದೇಶಕರಾದ ನಾಗೇಂದ್ರ, ಮಧು, ಚೆಂಗುಮಣಿ, ಸಿದ್ದರಾಜು, ಮಹದೇವಸ್ವಾಮಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಇಮ್ರಾನ್, ಕಾರ್ಯದರ್ಶಿ ಮಹದೇವಪ್ರಭು, ಜಿಎಪಿ ಅಧ್ಯಕ್ಷ ಕೃಷ್ಣ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣ್, ಗುತ್ತಿಗೆದಾರರಾದ ಎಂ.ಸಿ. ಮಹದೇವಸ್ವಾಮಿ, ವೀರೇಶ್, ಕುಮಾರ್ ಭಾಗವಹಿಸಿದ್ದರು.