ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮೈತ್ರಿಗೆ ಮಾಡಿದ ನಂಬಿಕೆದ್ರೋಹ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಇತ್ತು. ಹೆಚ್ಚುವರಿ ಮತವನ್ನು ಮೈತ್ರಿ ಅಭ್ಯರ್ಥಿಗೆ ನೀಡಿ ಎಂದು ಹೇಳಿದ್ದರು. ಆದರೆ, ಚುನಾವಣೆಯಲ್ಲಿ ಅಡ್ಡ ಮತದಾನ ಆಗಿದೆ. ಅಮಿತ್ ಶಾ, ನಿತಿನ್ ನಬಿನ್ ಸೇರಿದಂತೆ ರಾಷ್ಟ್ರೀಯ ನಾಯಕರ ಜೊತೆ ಈ ವಿಚಾರ ಚರ್ಚೆ ಆಗಿರುತ್ತೆ. ರಾಷ್ಟ್ರೀಯ ನಾಯಕರು ಹೇಳಿದ್ಮೇಲೂ ಮತ ಹಾಕಿಲ್ಲ ಅಂದರೆ ರಾಷ್ಟ್ರೀಯ ನಾಯಕರಿಗೂ ಮಾಡಿರುವ ಅಪಮಾನ ಎಂದರು.

ಇಷ್ಟೊತ್ತಿಗೆ ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಆಗಬೇಕಿತ್ತು. ಕ್ರಮ ಆಗಲಿ ಅಂತ ನಾನು ಕೂಡ ಒತ್ತಾಯ ಮಾಡ್ತೇನೆ. ಎರಡು ಪಕ್ಷದ ಕಾರ್ಯಕರ್ತರು, ನಾಯಕರಿಗೂ ಇದು ಮುಜುಗರ ತಂದಿದೆ. ವಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಈ ಬಗ್ಗೆ ಕ್ರಮ ವಹಿಸ್ತಾರೆ ಎಂದರು.

ಹೆದರುವ ಪ್ರಶ್ನೆ ಇಲ್ಲ:


ಆರ್ ಎಸ್ಎಸ್ ನೋಂದಣಿ ಆಗಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ಎಸ್ ಗೆ ನೂರು ವರ್ಷ ಆಗಿದೆ. ಸಂವಿಧಾನಾತ್ಮವಾಗಿ ನಾವು ಕೆಲಸ ಮಾಡ್ತೇವೆ ಅಂದ್ಮೇಲೆ ಮುಗೀತು. ಸಂವಿಧಾನಾತ್ಮಕವಾಗಿ ಯಾವುದೇ ಚಟುವಟಿಕೆ ಮಾಡಿಲ್ವಲ್ಲ? ಇದರ ಬಗ್ಗೆ ಯಾರು ದೂರು ಕೊಟ್ಟಿಲ್ವಲ್ಲ? ಆರ್‌ಎಸ್ಎಸ್ ಬಗ್ಗೆ ಹೇಳಿಕೆ ಕೊಟ್ಟ ತಕ್ಷಣ ಹೆದರುವ ಪ್ರಶ್ನೆ ಇಲ್ಲ ಎಂದರು.

ಮಹದೇವಪ್ಪಗೂ ಮುಂಚೆ ಸಚಿರಾಗಿದ್ದು ಪ್ರಿಯಾಂಕ್ ಖರ್ಗೆ ಸಾಧನೆ. ಆರ್ ಎಸ್ಎಸ್ ಬಗ್ಗೆ ಮಾತನಾಡಿದ್ದಕ್ಕೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಮ್ಮನ್ನು ಹೆದರಿಸುವ ಪ್ರಶ್ನೆಯೇ ಇಲ್ಲ. ಧ್ವಜದ ಮೇಲಿನ ಗೌರವ ಕಡಿಮೆ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ಕೌಟಿಲ್ಯ ರಘು ಆಯ್ಕೆ: ಬಿಜೆಪಿ ಕಚೇರಿಯಲ್ಲಿ ಸಂಭ್ರಮೋತ್ಸವ

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಿಸಿದರು.ನಗರದ ಬಿಜೆಪಿ ಕಚೇರಿ ಮುಂಭಾಗ ಸಮಾವೇಶಗೊಂಡ ಮುಖಂಡರು ಕೌಟಿಲ್ಯ ರಘು ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಸಾರ್ವಜನಿಕರು, ಕಾರ್ಯಕರ್ತರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಅದರಲ್ಲೂ ಮೈಸೂರಿನವರೇ ಆದ, ಹಿಂದುಳಿದ ವರ್ಗದ ಕೌಟಿಲ್ಯ ರಘು ಅವರು ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ. ಪಕ್ಷದ ವರಿಷ್ಟರು ಜಿಲ್ಲೆಗೆ ಪ್ರಾತಿನಿಧ್ಯ ನೀಡಿ ಅವಕಾಶ ಕಲ್ಪಿಸಿದ್ದಾರೆ ಎಂದರು.ರಾಜ್ಯಸಭೆಗೂ ಕುರುಬ ಸಮಾಜದ ನಾಗರಾಜು ಅವರನ್ನು ಆಯ್ಕೆ ಮಾಡಿ ಹಿಂದುಳಿದ ವರ್ಗಗಳಿಗೆ ಹೆಚ್ಚು ಒತ್ತು ನೀಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಿತಿನ್ ನಬಿನ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಚುನಾಯಿತ ಪ್ರತಿನಿಧಿಗಳು ಪರಿಷತ್‌ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿರುವುದು ಬೇಸರ ತರಿಸಿದೆ. ಪಕ್ಷದ ವರಿಷ್ಠರು ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.