ಕನ್ನಡಪ್ರಭ ವಾರ್ತೆ ಬೆಂಗಳೂರು:
ಅಪಘಾತಕ್ಕೆ ಮೂಲ ಕಾರಣ ಟ್ರ್ಯಾಕ್ಟರ್ ಆಗಿದ್ದರೆ, ಪರಿಹಾರದ ವಿಚಾರದಲ್ಲಿ ವಿಮೆ ಮಾಡಲಾದ ಟ್ರ್ಯಾಕ್ಟರ್ ವಾಣಿಜ್ಯ ಉದ್ದೇಶ ಅಥವಾ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವ ಮೂಲಕ ಮೋಟಾರು ವಾಹನ ಕಾಯ್ದೆ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಪ್ರಶ್ನೆಯೇ ಅಪ್ರಸ್ತುತವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.ಪ್ರಕರಣದಲ್ಲಿ ಸಂತ್ರಸ್ತನಿಗೆ ಪರಿಹಾರ ಪಾವತಿಸುವಂತೆ ನ್ಯಾಯಾಧಿಕರಣದ ಆದೇಶ ರದ್ದು ಕೋರಿ ಟ್ರ್ಯಾಕ್ಟರ್‌ಗೆ ವಿಮಾ ಪಾಲಿಸಿ ನೀಡಿದ್ದ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರ ಪೀಠ ಈ ಅಭಿಪ್ರಾಯಪಟ್ಟು, ನ್ಯಾಯಾಧಿಕರಣ ಅದೇಶವನ್ನು ಎತ್ತಿ ಹಿಡಿದಿದೆ.
ವಿಮಾ ಕಂಪನಿ ಪರ ವಕೀಲರು, ಪ್ರಕರಣದಲ್ಲಿ ಬೈಕ್ ಮತ್ತು ನೀರಿನ ಟ್ಯಾಂಕರ್ ಅಳವಡಿಸಿದ್ದ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ನೀರಿನ ಟ್ಯಾಂಕರ್ ಜೋಡಿಸಲಾಗಿತ್ತು. ಅಂದರೆ ಟ್ರ್ಯಾಕ್ಟರ್ ಅನ್ನು ಅದರ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರು. ಆದರೆ, ಮಾಲೀಕರು ಪಡೆದ ವಿಮಾ ಪಾಲಿಸಿ ಕೃಷಿ ಮತ್ತು ಇತರೆ ಉದ್ದೇಶಗಳಿಗೆ ಬಳಸುವ ಖಾಸಗಿ ವಾಹನಕ್ಕೆ ಸಂಬಂಧಿಸಿದ್ದಾಗಿದೆ. ಅಂಥ ವಾಹನ ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಷಿದ್ಧ. ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ವಿಶೇಷ ಅನುಮತಿ, ಫಿಟ್‌ನೆಸ್ ಸರ್ಟಿಫಿಕೇಟ್ ಅಗತ್ಯ.‘ಪರ್ಮಿಟ್’ ಹೊಂದಿರುವುದು ಕಡ್ಡಾಯ. ಇದ್ಯಾವ ದಾಖಲೆಗಳನ್ನೂ ಪಡೆಯದ ಟ್ರ್ಯಾಕ್ಟರ್ ಮಾಲೀಕನ ಮೇಲೆ ಪರಿಹಾರ ಪಾವತಿಸುವ ಹೊಣೆ ಹೊರಿಸಬೇಕು ಎಂದು ಕೋರಿದರು.ನ್ಯಾಯಾಧಿಕರಣದ ಕ್ರಮ ಸರಿ ಆಗಿದೆ:
ಈ ವಾದ ಒಪ್ಪದ ಹೈಕೋರ್ಟ್, ಇಂಥ ಪ್ರಕರಣಗಳಲ್ಲಿ ಮೊದಲು ನಿರ್ಧರಿಸಬೇಕಾದ ಸಂಗತಿಯೇನೆಂದರೆ ಅಪಘಾತಕ್ಕೆ ಮೂಲ ಕಾರಣ ವಿಮೆ ಮಾಡಲಾದ ಟ್ರಾಕ್ಟರ್ ಅಥವಾ ಟ್ರಾಕ್ಟರ್‌ಗೆ ಜೋಡಿಸಲಾದ ಉಪಕರಣ ಆಗಿದೆಯೇ ಎಂಬುದು. ಅಪಘಾತಕ್ಕೆ ಮೂಲ ಕಾರಣ ಟ್ರಾಕ್ಟರ್ ಆಗಿದ್ದರೆ, ಟ್ರ್ಯಾಕ್ಟರ್‌ನ ವಿಮಾ ಕಂಪನಿಯು ಪರಿಹಾರ ಪಾವತಿಯ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು. ಪ್ರಸ್ತುತ ಪ್ರಕರಣದಲ್ಲಿ ಟ್ರಾಕ್ಟರ್ ಎಂಜಿನ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ವಿಮೆ ಮಾಡಲಾದ ಟ್ರ್ಯಾಕ್ಟರ್ ಅನ್ನು ವಾಣಿಜ್ಯ ಉದ್ದೇಶ ಅಥವಾ ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಮೋಟಾರು ವಾಹನ ಕಾಯ್ದೆ ನಿಬಂಧನೆ ಉಲ್ಲಂಘಿಸಲಾಗಿದೆಯೇ ಎಂಬುದೇ ಅಪ್ರಸ್ತುತ. ಹಾಗಾಗಿ, ವಿಮಾ ಕಂಪನಿ ಮೇಲೆ ಪರಿಹಾರ ಪಾವತಿ ಹೊಣೆಗಾರಿಕೆ ಹೊರಿಸಿದ ನ್ಯಾಯಾಧಿಕರಣದ ಕ್ರಮ ಸಮರ್ಥನೀಯವಾಗಿದೆ ಎಂದು ಹೇಳಿದೆ.
ಶೇ.90ರಷ್ಟು ಅಂಗೈಕಲ್ಯಕ್ಕೆ ತುತ್ತಾದ ನೇಕಾರ:
2015ರ ಫೆ.9ರಂದು ಆನೇಕಲ್‌ನಲ್ಲಿ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮಿಥುನ್ ಶೇ.90ರಷ್ಟು ಅಂಗವೈಕಲ್ಯಕ್ಕೆ ಗುರಿಯಾಗಿದ್ದ. ಆತನ ಪರಿಹಾರ ಕ್ಲೇಮು ಅರ್ಜಿ ಪುರಸ್ಕರಿಸಿದ್ದ ನ್ಯಾಯಾಧಿಕರಣ, ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆ ಮತ್ತು ಅತಿವೇಗದಿಂದ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ವಿಮಾ ಪಾಲಿಸಿ ನೀಡಿರುವ ಕಂಪನಿಯು ಮಿಥುನ್‌ಗೆ ವಾರ್ಷಿಕ ಶೇ.9ರಷ್ಟು ಬಡ್ಡಿದರದಲ್ಲಿ 15.38 ಲಕ್ಷ ರು. ಪರಿಹಾರ ಪಾವತಿಸಬೇಕು ಎಂದು 2016ರ ನ.8ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.- ಬಾಕ್ಸ್-
ಘಟನೆ ನಡೆದಾಗ ಮಿಥುನ್‌ಗೆ 21 ವರ್ಷ. ಆತ ನೇಕಾರನಾಗಿ ಕೆಲಸ ಮಾಡುತ್ತಿದ್ದ. ತನ್ನ ಮಾಸಿಕ ಆದಾಯ 12 ಸಾವಿರ ರು. ಎಂದು ಮಿಥುನ್ ಹೇಳಿದರೂ, ಅದಕ್ಕೆ ಸೂಕ್ತ ದಾಖಲೆ ಸಲ್ಲಿಸಿಲ್ಲ. ನ್ಯಾಯಾಧಿಕರಣವು ಮಾಸಿಕ 7,500 ಸಾವಿರ ರು. ಎಂದು ಪರಿಗಣಿಸಿ, 15.38 ಲಕ್ಷ ರು. ಪರಿಹಾರ ನಿಗದಿಪಡಿಸಿದೆ. ಆತ ಅಪಘಾತದಿಂದ ಶೇ.90ರಷ್ಟು ಅಂಗವೈಕಲ್ಯಕ್ಕೆ ಗುರಿಯಾಗಿದ್ದಾನೆ. 2015ರಲ್ಲಿ ಆತನ ಕಾಲ್ಪನಿಕ ಆದಾಯ ಮಾಸಿಕ 9 ಸಾವಿರ ರು. ಎಂದು ಪರಿಗಣಿಸಿದರೆ ಪರಿಹಾರ ಮೊತ್ತ ಹೆಚ್ಚಾಗುತ್ತದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಪರಿಹಾರ ಪ್ರಮಾಣವನ್ನು 23,13,800 ರು.ಗೆ ಹೆಚ್ಚಿಸಿದೆ.