ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಹಿತಾಸಕ್ತಿ ಕಾಪಾಡುವ ಜತೆಗೆ ಉಭಯರ ನಡುವೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಇದು ರಾಜಕಾರಣ ಮಾಡುವ ಸಭೆಯಲ್ಲ. ಎಲ್ಲರ ಸಮಸ್ಯೆಗಳನ್ನು ಆಲಿಸಿ ಒಮ್ಮತದ ನಿರ್ಧಾರ ಕೈಗೊಳ್ಳುವ ವೇದಿಕೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ:
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಹಿತಾಸಕ್ತಿ ಕಾಪಾಡುವ ಜತೆಗೆ ಉಭಯರ ನಡುವೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಇದು ರಾಜಕಾರಣ ಮಾಡುವ ಸಭೆಯಲ್ಲ. ಎಲ್ಲರ ಸಮಸ್ಯೆಗಳನ್ನು ಆಲಿಸಿ ಒಮ್ಮತದ ನಿರ್ಧಾರ ಕೈಗೊಳ್ಳುವ ವೇದಿಕೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ನಗರದ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೆಚ್ಚಿನ ದರದ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದೆ. 10 ವರ್ಷಗಳಿಂದ ಸಕ್ಕರೆಯ ಬೆಲೆಯಲ್ಲಿ ಗಮನಾರ್ಹ ಏರಿಕೆ ಆಗದ ಹಿನ್ನೆಲೆಯಲ್ಲಿ ರೈತರ ನಷ್ಟ ಹೆಚ್ಚಾಗಿದೆ. ಹೀಗಾಗಿ, ಪ್ರತಿ ಟನ್ ಕಬ್ಬಿಗೆ ₹6 ಸಾವಿರದವರೆಗೆ ದರ ನಿಗದಿಪಡಿಸಿ ಪರಿಹಾರ ನೀಡಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಹಿಂದೆ ರೈತರ ಬೇಡಿಕೆಗೆ ಸ್ಪಂದಿಸಿ, ಒಂದು ಭಾಗದ ಹಣವನ್ನು ಸರ್ಕಾರ ಹಾಗೂ ಉಳಿದ ಮೊತ್ತವನ್ನು ಸಕ್ಕರೆ ಕಾರ್ಖಾನೆಗಳು ಭರಿಸುವ ತೀರ್ಮಾನ ಕೈಗೊಂಡಿತ್ತು. ಶೇ.80ರಷ್ಟು ಕಾರ್ಖಾನೆಗಳು ಈ ನಿರ್ಧಾರ ಪಾಲಿಸಿವೆ. ಆದರೆ, ಕೆಲವು ಕಾರ್ಖಾನೆಗಳು ತೀರ್ಮಾನ ಜಾರಿಗೊಳಿಸದೆ ನ್ಯಾಯಾಲಯದ ಮೊರೆ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ರೈತರು ಮತ್ತು ಕಾರ್ಖಾನೆಗಳ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಕಾರ್ಖಾನೆಗಳಿಲ್ಲದೆ ರೈತರಿಗೆ ತೊಂದರೆಯಾದರೆ, ರೈತರಿಲ್ಲದೆ ಕಾರ್ಖಾನೆಗಳಿಗೂ ಸಂಕಷ್ಟ ಎದುರಾಗಲಿದೆ. ಹೀಗಾಗಿ, ಇಬ್ಬರ ಹಿತಾಸಕ್ತಿಗೂ ಧಕ್ಕೆಯಾಗದ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.ಕಾರ್ಖಾನೆ ಮಾಲೀಕರಿಗೂ ಹಣಕಾಸಿನ ಕೊರತೆ, ಬ್ಯಾಂಕ್ ಸಾಲ, ಎಥನಾಲ್ ಖರೀದಿ ಹಾಗೂ ವಿದ್ಯುತ್ ದರ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ರೈತರ ಬಳಿ ಸಮಯ ಕೇಳಿದ್ದೆ. ಇಂದು ಇಡೀ ಸರ್ಕಾರವೇ ನಿಮ್ಮ ಮುಂದೆ ಕುಳಿತಿದೆ ಎಂದು ಕಾರ್ಖಾನೆ ಮಾಲೀಕರಿಗೆ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಪರಿಹಾರ ಅಗತ್ಯ:ಕಬ್ಬಿನ ಬೆಲೆ ಹಾಗೂ ಸಕ್ಕರೆ ಉದ್ಯಮದ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಕ್ಕರೆ ಉತ್ಪಾದನೆಯೂ ಕುಸಿದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಅಂಶಗಳು ಉದ್ಯಮದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವಿವರಿಸಿದರು.
ಶಾಸಕರು ಮತ್ತು ಸಂಸದರಿಗೆ ತಮ್ಮದೇ ಆದ ಒತ್ತಡಗಳಿರಬಹುದು. ಆದರೆ, ಈ ಸಮಸ್ಯೆಯನ್ನು ರಾಜಕೀಯಗೊಳಿಸುವ ಬದಲು ಸೌಹಾರ್ದಯುತವಾಗಿ ಪರಿಹರಿಸಬೇಕು. ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳನ್ನು ಹಾಗೂ ಪರಿಹಾರದ ಮಾರ್ಗಗಳನ್ನು ಸಭೆಯಲ್ಲಿ ಪ್ರಸ್ತಾಪಿಸಬೇಕು. ರೈತರ ಬದುಕು ಮತ್ತು ಸಕ್ಕರೆ ಉದ್ಯಮದ ಭವಿಷ್ಯ ಎರಡೂ ಸರ್ಕಾರಕ್ಕೆ ಮುಖ್ಯ ಎಂದರು.ಕಬ್ಬಿನ ತೂಕದಲ್ಲಿ ವಂಚನೆ: ಎಚ್ಕೆಪಿಕಬ್ಬಿಗೆ ಹೆಚ್ಚಿನ ದರ ನೀಡುವ ಬೇಡಿಕೆಯ ನಡುವೆಯೇ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವಂಚನೆ ನಡೆಯುತ್ತಿದೆ ಎಂಬ ಆರೋಪವೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರತಿ ಸಕ್ಕರೆ ಕಾರ್ಖಾನೆಯಲ್ಲೂ ತೂಕದಲ್ಲಿ ಮೋಸವಾಗುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು. ಮಾನವರಹಿತ ತೂಕದ ಯಂತ್ರ ಅಳವಡಿಸುವ ಘೋಷಣೆ ಈವರೆಗೂ ಜಾರಿ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಖಾನೆಗಳ ಮುಂದೆ ಮಾನವರಹಿತ ತೂಕದ ಯಂತ್ರಗಳನ್ನು ಅಳವಡಿಸುವುದಾಗಿ ಸರ್ಕಾರ ಹಲವು ಬಾರಿ ಹೇಳಿದೆ. ಆದರೆ, ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಎಲ್ಲೆಡೆ ಮಾನವರಹಿತ ತೂಕದ ಯಂತ್ರಗಳನ್ನು ಅಳವಡಿಸುವುದು ಕಷ್ಟ ಎಂದು ಸಮಜಾಯಿಷಿ ನೀಡಿದರು.ಎಂಎಸ್ಪಿ ಹೆಚ್ಚಿಸಿ: ಕಾರ್ಖಾನೆ ಮಾಲೀಕರು;
ರೈತರ ಬೇಡಿಕೆಯಂತೆ ಕಬ್ಬಿಗೆ ಹೆಚ್ಚಿನ ದರ ನೀಡಬೇಕಾದರೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಹೆಚ್ಚಳ ಅಗತ್ಯ ಎಂದು ಬಹುತೇಕ ಕಾರ್ಖಾನೆ ಮಾಲೀಕರು ಪ್ರತಿಪಾದಿಸಿದರು. ಹಲವು ವರ್ಷಗಳಿಂದ ಎಂಎಸ್ಪಿ ಹೆಚ್ಚಳವಾಗಿಲ್ಲ. ಕಾರ್ಖಾನೆಗಳಿಂದ ಎಥೆನಾಲ್ ಖರೀದಿ ಪ್ರಮಾಣವನ್ನೂ ಹೆಚ್ಚಿಸಿದರೆ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.