ಐಟಿ-ಬಿಟಿ ಕಂಪನಿಗಳು ಹಾಗೂ ಇತರೆ ಪ್ರಮುಖ ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರದಲ್ಲಿ ತಾರತಮ್ಯ ಎಸಗುತ್ತಿರುವ ಕುರಿತು ಸಮಗ್ರ ತನಿಖೆ ಮತ್ತು ಪರಿಶೀಲನೆ ನಡೆಸಬೇಕು. ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ನ.1ರಿಂದಲೇ ಸರ್ಕಾರ ಜಾರಿಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಐಟಿ-ಬಿಟಿ ಕಂಪನಿಗಳು ಹಾಗೂ ಇತರೆ ಪ್ರಮುಖ ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರದಲ್ಲಿ ತಾರತಮ್ಯ ಎಸಗುತ್ತಿರುವ ಕುರಿತು ಸಮಗ್ರ ತನಿಖೆ ಮತ್ತು ಪರಿಶೀಲನೆ ನಡೆಸಬೇಕು. ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ನ.1ರಿಂದಲೇ ಸರ್ಕಾರ ಜಾರಿಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಈ ಕುರಿತು ಯುವ ಕರ್ನಾಟಕ ವೇದಿಕೆ, ಕರ್ನಾಟಕ ವಿಕಾಶ ರಂಗ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇತರೆ ಕನ್ನಡಪರ ಸಂಘಟನೆಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರರನ್ನು ಭೇಟಿ ಮಾಡಿ ಮನವಿ ಪತ್ರ ನೀಡಲು ಸಿದ್ಧತೆ ನಡೆಸಿವೆ.

ಕನ್ನಡ ನೆಲದಲ್ಲೇ ಕಡೆಗಣನೆ:

ಕನ್ನಡ ನೆಲದಲ್ಲಿಯೇ ಸ್ಥಳೀಯ ಕನ್ನಡಿಗರು ಉದ್ಯೋಗ ಪಡೆಯಲು ತೀವ್ರ ಅಡೆತಡೆ ಹಾಗೂ ಕಡೆಗಣನೆ ಎದುರಿಸುತ್ತಿದ್ದಾರೆ. ಖಾಸಗಿ ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಾನವ ಸಂಪನ್ಮೂಲ ಅಧಿಕಾರಿಗಳು ಮತ್ತು ಅಂತಿಮ ಆಯ್ಕೆ ಪ್ರಕ್ರಿಯೆಯ ಉನ್ನತ ಹುದ್ದೆಗಳಲ್ಲಿ ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗುವಂತಾಗಬೇಕೆಂದು ಮನವಿಯಲ್ಲಿ ಆಗ್ರಹಿಸುವುದಾಗಿ ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್‌ ರಾಜಣ್ಣ ತಿಳಿಸಿದರು.

ಸ್ಥಳೀಯ ಭಾಷೆ ಮತ್ತು ಹಿನ್ನೆಲೆ ಕಾರಣಕ್ಕೆ ಕನ್ನಡಿಗರ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಸರ್ಕಾರ ಈ ಬಗ್ಗೆ ವಸ್ತುಸ್ಥಿತಿ ಪರಿಶೀಲನೆ ನಡೆಯಬೇಕಿದೆ. ರಾಜ್ಯದಲ್ಲಿರುವ ಐಟಿ, ಬಿಟಿ ಸೇರಿದಂತೆ ಎಲ್ಲಾ ಪ್ರಮುಖ ಖಾಸಗಿ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿ ಹಾಗೂ ನೇಮಕಾತಿ ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ವಿವರಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದರು.

ಖಾಸಗಿ ಸಂಸ್ಥೆಗಳಲ್ಲಿನ ಒಟ್ಟು ಉದ್ಯೋಗಿಗಳ ಪೈಕಿ ಕನ್ನಡಿಗರ ಪ್ರಮಾಣ ಎಷ್ಟು ಮತ್ತು ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟಿದೆ ಎಂಬುದರ ಅಂಕಿ-ಅಂಶಗಳನ್ನು ಸರ್ಕಾರ ಕಲೆಹಾಕಬೇಕು. ನೇಮಕಾತಿ ವೇಳೆ ಕನ್ನಡ ಭಾಷೆ, ಸ್ಥಳೀಯತೆ ಅಥವಾ ಇತರೆ ಅನರ್ಹ ಮಾನದಂಡಗಳನ್ನು ಮುಂದಿಟ್ಟುಕೊಂಡು ತಾರತಮ್ಯ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕನ್ನಡಿಗರೆಂಬ ಕಾರಣಕ್ಕೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬ ದೂರುಗಳ ವಿಚಾರಣೆ ಹಾಗೂ ಪರಿಹಾರಕ್ಕಾಗಿ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸುವುದಾಗಿ ಕನ್ನಡಪ್ರಭಕ್ಕೆ ತಿಳಿಸಿದರು.

ಕಾನೂನು ಕ್ರಮಕೈಗೊಳ್ಳಿ:

ಅರ್ಹ ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯಸಮ್ಮತ ಉದ್ಯೋಗಾವಕಾಶ ಖಾತರಿಪಡಿಸಲು ಸಮಗ್ರ ನೀತಿ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಪರಿಶೀಲನೆ ವೇಳೆ ತಾರತಮ್ಯ ಅಥವಾ ನಿಯಮ ಉಲ್ಲಂಘನೆ ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ. ----

ಕೋಟ್‌...

ಕರ್ನಾಟಕದ ನೆಲದಲ್ಲಿ ಎಲ್ಲರೂ ಗೌರವದಿಂದ ಬದುಕಿ ದುಡಿಯಲಿ ಎಂಬುದೇ ನಮ್ಮ ಆಶಯ. ಆದರೆ, ಹುಟ್ಟಿ ಬೆಳೆದ ನೆಲದಲ್ಲೇ ಕನ್ನಡಿಗರು ಉದ್ಯೋಗಕ್ಕಾಗಿ ಅನ್ಯಾಯ, ಕಡೆಗಣನೆ ಅನುಭವಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡಿಗರ ಉದ್ಯೋಗ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು ಮತ್ತು ಸ್ವಾಭಿಮಾನದ ಪ್ರಶ್ನೆ. ಸರ್ಕಾರ ನ.1ರಂದು ಕನ್ನಡಿಗರಿಗೆ ಉದ್ಯೋಗ ಖಾತ್ರಿ ಘೋಷಿಸಬೇಕು.

-ರೂಪೇಶ್‌ ರಾಜಣ್ಣ, ರಾಜ್ಯಾಧ್ಯಕ್ಷ, ಯುವ ಕರ್ನಾಟಕ ವೇದಿಕೆ----

ಕೋಟ್‌....

ಕನ್ನಡಿಗರ ಉದ್ಯೋಗ ಹಿತರಕ್ಷಣೆಯ ಹಿತದೃಷ್ಟಿಯಿಂದ ಸರ್ಕಾರ ಸಂಬಂಧಪಟ್ಟ ಕಾರ್ಮಿಕ ಮತ್ತು ಐಟಿ ಇಲಾಖೆಗಳ ಮೂಲಕ ತ್ವರಿತ ಪರಿಶೀಲನೆ ಕೈಗೊಂಡು ಸ್ಥಳೀಯರಿಗೆ ನ್ಯಾಯ ಒದಗಿಸಬೇಕು. ಬೊಮ್ಮಸಂದ್ರದಿಂದ ಅತ್ತಿಬೆಲೆ-ಹೊಸೂರು ಗಡಿಯವರೆಗೆ ಮೆಟ್ರೋ ವಿಸ್ತರಣೆ ಮಾಡಿದರೆ ಕನ್ನಡಿಗರಿಗೆ ಉದ್ಯೋಗ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ. ಸರ್ಕಾರ ಈ ಪ್ರಸ್ತಾವನೆ ಕೈಬಿಡಬೇಕು.

- ಪ್ರವೀಣ್‌ ಕುಮಾರ್‌ ಶೆಟ್ಟಿ, ರಾಜ್ಯಾಧ್ಯಕ್ಷ, ಕರವೇ.

-ಬಾಕ್ಸ್‌-

ಕನ್ನಡಿಗರಿಗೆ ಅನ್ಯಾಯ ಬಗ್ಗೆ

ವರದಿ ಮಾಡಿದ್ದ ‘ಕನ್ನಡಪ್ರಭ’

ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಕನ್ನಡಿಗರು ರೆಸ್ಯೂಮ್‌ನಲ್ಲಿ ಮಾತೃಭಾಷೆ ಕನ್ನಡ ಎಂದು ಬರೆದಿದ್ದರೆ, ಅಂತಹ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿರುವ ಬಗ್ಗೆ ಅ.24ರಂದು ಕನ್ನಡಪ್ರಭ ಎಲ್ಲರಿಗಿಂತ ಮೊದಲೇ ವರದಿ ಪ್ರಕಟಿಸಿತ್ತು.