ರೈತರಿಗೆ ಶಾಶ್ವತ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಅಚಲ ನಿರ್ಧಾರ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ:
ರೈತರಿಗೆ ಶಾಶ್ವತ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಅಚಲ ನಿರ್ಧಾರ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರು ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಚರ್ಚೆ ಮಾಡಿದ್ದೇವೆ. ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾವು ಯಾವುದೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಕ್ಕರೆ ಎಂಎಸ್ಪಿ ಏರಿಕೆ ಆಗದೆ ರೈತರಿಗೆ ಹೆಚ್ಚಿನ ಬೆಲೆ ನೀಡಲು ಸಕ್ಕರೆ ಮಾಲೀಕರು ಒಪ್ಪುವುದಿಲ್ಲ. ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ರೈತರಿಗೆ ತೊಂದರೆ ಆಗುತ್ತದೆ ಎಂದರು.
ಅ.29ರಂದು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಜಂಟಿ ಸಮಿತಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ನಾನು ಆತುರದ ತೀರ್ಮಾನ ಮಾಡುವುದಿಲ್ಲ. ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ಕೇಂದ್ರ ಸರ್ಕಾರ ಹಾಗೂ ಸಮಿತಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ನಾನು ರೈತರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಪ್ರತಿಭಟನೆ ಮಾಡಬಾರದು ಎಂದು ಮನವಿ ಮಾಡುತ್ತೀರಾ ಎಂದು ಕೇಳಿದಾಗ, ನಾವು ಅವರ ಪರವಾಗಿರುವಾಗ ಪ್ರತಿಭಟನೆ ಯಾಕೆ? ಎಂದರು. ಪ್ರಧಾನಮಂತ್ರಿಗೆ ಪತ್ರ ಬರೆಯುತ್ತೀರಾ ಎಂದಾಗ, ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವರ ಜತೆಗೂ ಚರ್ಚಿಸುವೆ. ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡುವೆ. ನಮ್ಮ ರಾಜ್ಯದವರೆಲ್ಲ ಸೇರಿ ಒಟ್ಟಾಗಿ ತೀರ್ಮಾನ ಮಾಡಬೇಕಿದೆ ಎಂದರು.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸೂಚನೆ ನೀಡುತ್ತೀರಾ ಎಂದು ಕೇಳಿದಾಗ, ನಾನು ಈ ವಿಚಾರವಾಗಿ ಮನವಿ ಮಾಡುತ್ತೇನೆ. ಕಬ್ಬು ಅರೆಯುವುದು ಆರಂಭವಾಗಲಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವುದು ಆರಂಭವಾಗಿದೆ. ನಮ್ಮ ಕಬ್ಬು ಬೆಳೆ ಮಹಾರಾಷ್ಟ್ರಕ್ಕೆ ಹೋಗುವುದಕ್ಕೆ ಅವಕಾಶ ನೀಡುವುದು ಬೇಡ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದರು.ರೈತರ ಪರವಾಗಿ ಮಾತನಾಡುವೆ:
ಇದಕ್ಕೂ ಮುನ್ನ ಕಬ್ಬು ಬೆಳೆಗಾರರ ಜತೆಗಿನ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎಂ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ನಾವು ಮಹಾರಾಷ್ಟ್ರ ಸಿಎಂ ಜೊತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಮಿತಿ ರಾಜ್ಯಕ್ಕೆ ಬಂದಾಗ ಅದರ ಮುಂದೆ ನಾನು ಬರುತ್ತೇನೆ, ಕಬ್ಬು ಬೆಳೆಗಾರರ ಪರವಾಗಿ ನಾನು ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.ಸಕ್ಕರೆ ಎಂಎಸ್ ಪಿ ಹೆಚ್ಚಾಗುವವರೆಗೂ ನಾವು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಇದು ಆತುರ, ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರ ಅಲ್ಲ. ನಿಮ್ಮ ಧ್ವನಿ ನನ್ನ ಧ್ವನಿಯಾಗುತ್ತದೆ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನ್ನ ಹಾಗೂ ಸರ್ಕಾರದ ಪರಿಸ್ಥಿತಿ ಅರಿಯಬೇಕು. ನಾವು ನಿಮ್ಮ ಪರವಾಗಿ ವಾದ ಮಾಡಲು ಸಿದ್ಧವಿದ್ದೇವೆ ಎಂದು ಧೈರ್ಯ ತುಂಬಿದರು.
ಇಂದಿನ ಸಭೆಯಲ್ಲಿ ಕಬ್ಬಿನ ತೂಕ, ಕಬ್ಬು ಸಾಗಾಣೆ ಸೇರಿದಂತೆ ರೈತರ ಎಲ್ಲಾ ಸಮಸ್ಯೆಗಳ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ರೈತರು ನಮ್ಮ ಆರ್ಥಿಕ ಪರಿಸ್ಥಿತಿ ಅರಿಯಬೇಕು. ನಾವು ಕಾರ್ಖಾನೆ ಹಾಗೂ ಕೇಂದ್ರ ಸರ್ಕಾರ ಒಪ್ಪಿಸಿ ಪರಿಹಾರ ನೀಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿವರಿಸಿದರು.ನಿಮ್ಮ ಹೋರಾಟಕ್ಕೆ ಗೌರವ ನೀಡಿ ನಾನೇ ನಿಮ್ಮನ್ನು ಕಿತ್ತೂರಿನಲ್ಲಿ ಭೇಟಿ ಮಾಡಿದೆ. ಅಂದು ನಾನು ಎಲ್ಲರ ಜೊತೆ ಚರ್ಚೆ ಮಾಡಿ ನಿಮ್ಮ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದೆ. ಅದರಂತೆ ಇಂದು ಸಭೆ ಕರೆದಿದ್ದೇನೆ. ಭೀಕರ ಬರಗಾಲ ಬಂದಿದೆ. ಮಹಾರಾಷ್ಟ್ರದಲ್ಲಿ ಮಳೆಯಾದ ಕಾರಣ ಕೃಷ್ಣಾ ಅಣೆಕಟ್ಟು ತುಂಬಿದೆ. ಉಳಿದಂತೆ ಯಾವುದೇ ಅಣೆಕಟ್ಟು ತುಂಬಿಲ್ಲ ಎಂದರು.
ಕಳೆದ ವರ್ಷ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಿ 300 ರೂ.ನೀಡಲು ತೀರ್ಮಾನಿಸಿದೆವು. ಏತ ನೀರಾವರಿ ಯೋಜನೆಗೆ ಬಳಸಲಾಗಿರುವ ವಿದ್ಯುತ್ ಬಿಲ್ ಕಟ್ಟಬೇಕಿದೆ. ನಿಮ್ಮ ಬೇಡಿಕೆ ತಪ್ಪಿಲ್ಲ. ಡೀಸೆಲ್, ರಸಗೊಬ್ಬರ, ಕೀಟ ನಾಶಕ ಬೆಲೆ ಹೆಚ್ಚಾಗಿದೆ. ಸಕ್ಕರೆ ಬೆಲೆ ಏರಿಕೆಯಾಗಿಲ್ಲ. ನಾವು ರಾಜಕಾರಣ ಮಾಡಿ ಜಗಳವಾಡಿದರೆ ಪರಿಹಾರ ಸಿಗಲ್ಲ ಎಂದರು.ಕಬ್ಬು ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿದಿದೆ. ಎಥನಾಲ್ ಉತ್ಪಾದನೆಗೆ ಕಬ್ಬು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇತ್ತ ಸಕ್ಕರೆ ಎಂಎಸ್ ಪಿ ಏರಿಕೆ ಆದರೆ ನಾವು ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಸರ್ಕಾರದ ಹಣಕಾಸಿನ ಪರಿಸ್ಥಿತಿ ನೋಡಿ ಬೇಡಿಕೆ ಇಡಬೇಕು. ಇಂದೇ ಸಿಹಿ ಸುದ್ದಿ ನೀಡಿ ಎಂದರೆ ಎಲ್ಲಿಂದ ಹಣ ನೀಡೋಣ? ಎಂದು ತಿಳಿಸಿದರು.