ಸಾರಾಂಶ
ಹುಬ್ಬಳ್ಳಿ: ಛಾಯಾಗ್ರಾಹಕರು ಮತ್ತು ಪತ್ರಕರ್ತರು ಸಮಾಜ ತಿದ್ದುವ ಕಾರ್ಯ ಮಾಡುತ್ತಾರೆ. ಪೋಟೋದೊಂದಿಗೆ ಬರವಣಿಗೆ ಇದ್ದರೆ ಅದಕ್ಕೆ ಮಹತ್ವ ಬರುತ್ತದೆ. ಸುದ್ದಿಯ ಜತೆ ಛಾಯಾಚಿತ್ರ ಇದ್ದರೆ ಅದಕ್ಕೆ ಮೌಲ್ಯ ಬರಲು ಸಾಧ್ಯ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಬೆಂಗಳೂರಿನ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಫೋಕಸ್ ಆನ್ ನ್ಯೂಸ್ ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಛಾಯಾಗ್ರಹಣ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿವರ್ಷ ಇಂತಹ ಪ್ರದರ್ಶನ, ಮಾದರಿ ಕಾರ್ಯಕ್ರಮಗಳು ನಡೆಯಲಿ ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ನಾವು ಮಾತನಾಡುವ ಭಾಷೆಗಿಂತ ಎದುರಿನವರಿಗೆ ಅರ್ಥ ಮಾಡುವುದು ಮುಖ್ಯ. ಜನಸಾಮಾನ್ಯವಾಗಿ ಭಾಷೆ ಒಂದಾಗಿದ್ದರೂ ಅರ್ಥ ಬೇರೆ ಬೇರೆಯಾಗಿ ಕಲ್ಪಿಸುತ್ತದೆ. ಚಿತ್ರಕಲೆ ಮತ್ತು ಛಾಯಾಚಿತ್ರದಲ್ಲಿ ಸಾಕಷ್ಟು ಆಳವಾದ ವಿಷಯ ಅಡಕವಾಗಿರುತ್ತವೆ. ಆಯಾ ಕ್ಷೇತ್ರದಲ್ಲಿ ಪ್ರತಿಭೆ ಹೊಂದಿದ್ದರೆ ಯಾವುದೇ ಸವಾಲು ಎದುರಿಸಬಹುದು. ಇಂತಹ ಪ್ರದರ್ಶನದಿಂದ ಪ್ರತಿಭೆ ತೋರ್ಪಡಿಸಲು ಅವಕಾಶ ದೊರೆಯುತ್ತದೆ. ಹಾಗಾಗಿ ಪ್ರತಿವರ್ಷವೂ ಇಂತಹ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಕಾರ್ಯವಾಗಲಿ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಬೆಂಗಳೂರಿನ ಅಕಾಡೆಮಿಯಲ್ಲಿ ಪತ್ರಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕಿ ಶಿಪ್ರಾ ದಾಸ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಮಾಧ್ಯಮ ಅಕಾಡೆಮಿ ಸದಸ್ಯ ವೆಂಕಟೇಶ ಕೆ, ಅಬ್ಬಾಸ್ ಮುಲ್ಲಾ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಸೇರಿದಂತೆ ಹಲವರಿದ್ದರು. ಸಹನಾ ಎಂ ಸ್ವಾಗತಿಸಿದರು. ರಶ್ಮಿ ಎಸ್. ನಿರೂಪಿಸಿದರು.