ಗಂಗಾಮತ ಸಂಘಟನೆ ಇನ್ನಷ್ಟು ಗಟ್ಟಿಯಾಗಲಿ

| Published : Mar 24 2025, 12:30 AM IST / Updated: Mar 24 2025, 12:31 AM IST

ಸಾರಾಂಶ

ಶಿವಮೊಗ್ಗ: ರಾಜ್ಯದಲ್ಲಿ ದೊಡ್ಡ ಸಮುದಾಯಗಳಲ್ಲೊಂದಾದ ಗಂಗಾಮತ ಸಮುದಾಯ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಆಯೋಜಿಸಿದ್ದು, ಇದೊಂದು ಅದ್ಭುತವಾದ ಕಾರ್ಯವಾಗಿದೆ. ಗಂಗಾಮತ ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ರಾಜ್ಯದಲ್ಲಿ ದೊಡ್ಡ ಸಮುದಾಯಗಳಲ್ಲೊಂದಾದ ಗಂಗಾಮತ ಸಮುದಾಯ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಆಯೋಜಿಸಿದ್ದು, ಇದೊಂದು ಅದ್ಭುತವಾದ ಕಾರ್ಯವಾಗಿದೆ. ಗಂಗಾಮತ ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಮಾಧವ ಮಂಗಲ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಮೊಗವೀರ ಮಹಾಜನ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಬಂಧಗಳು ಜಾತಿ ಮೀರಿ ಹೋಗುತ್ತಿವೆ. ಇಂಥಹ ಸಮಾವೇಶಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಘಟನೆಗಳನ್ನು ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಗಳು ಇವುಗಳಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಹಾಯ ಮಾಡಲು ಮುಂದಾಗಬೇಕು. ಇಲ್ಲಿ ಕಂಕಣ ಬಲ ಕೂಡುವ ವಧು-ವರರಿಗೆ ಭಗವಂತ ಒಳ್ಳೆಯದನ್ನು ಮಾಡಲಿ. ಒಳ್ಳೆಯ ಸಂಬಂಧ ಬೇಳೆಯಲಿ ಎಂದು ಹಾರೈಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಗಂಗಾಮತದ ಎಲ್ಲರೂ ವಧು-ವರರ ಸಮಾವೇಶ ಮಾಡುವುದರ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದೀರಿ. ಹಿಂದೂ ಸಮಾಜವನ್ನು ಸದೃಢಗೊಳಿಸುವಲ್ಲಿ ಇಂಥಹ ಸಮಾವೇಶಗಳು ಸಹಕಾರಿಯಾಗುತ್ತವೆ. ಅನೇಕರಿಗೆ ಜೀವನ ಕೊಡುವ ಕೆಲಸ ಇದಾಗಿದೆ ಎಂದು ಶ್ಲಾಘಿಸಿದರು.ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಮಾತನಾಡಿ, ಇಂಥಹ ಸಮಾವೇಶಗಳು ತುಂಬಾ ಅವಶ್ಯಕತೆ ಇದೆ. ಇದೊಂದು ಮಹತ್ತರ ಕಾರ್ಯ. ಮುಂದಿನ ಪೀಳಿಗೆಯವರಿಗೆ ಬಳುವಳಿ. ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಳ್ಳಲು ಸಹಕಾರಿ ಎಂದರು.

ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ತಮ್ಮ ಸಮುದಾಯದಲ್ಲಿ ೩೭ ಉಪ ಪಂಗಡಗಳಿವೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಸಾಗಿದೆ. 250 ಪಾಲಕರು ಈ ಸಮಾವೇಶದಲ್ಲಿ ನೋಂದಣಿ ಮಾಡಿಕೊಂಡಿದ್ದು, ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆದಂತಾಗಿದೆ ಎಂದರು.

ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಸಾಂದರ್ಭಿಕ ಮಾತುಗಳನ್ನಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಸ್.ಚಂದ್ರಶೇಖರ್ ಮಾತನಾಡಿ, ಈ ಸಮಾವೇಶದಲ್ಲಿ ಸುಮಾರು ಇನ್ನೂರುಕ್ಕೂ ಹೆಚ್ಚು ವಧು ವರರು ಭಾಗವಹಿಸಿದ್ದು ಇದು ಯಶ್ವಸಿಯಾಗಿದೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಎ.ಹಾಲೇಶಪ್ಪ, ಪ್ರಮುಖರಾದ ಡಿ.ಬಿ.ಕೆಂಚಪ್ಪ, ಕೆ.ವಿ.ಅಣ್ಣಪ್ಪ, ರೂಪಾ ಹೇಮಂತರಾಜ್, ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ, ಸುನಿತಾ ಅಣ್ಣಪ್ಪ, ಎಲ್.ಪಿ.ರಂಗನಾಥ್, ಡಾ.ನಟರಾಜ್, ಎಸ್.ಬಿ.ಅಶೋಕ್ ಕುಮಾರ್, ಕೆ.ಶಿವಲಿಂಗಪ್ಪ, ಎಸ್.ಬಿ.ಸತೀಶ್, ಸತ್ಯನಾರಾಯಣ, ಆನಂದಪ್ಪ.ಬಿ., ದಿನೇಶ್, ಆರ್.ಜನಾರ್ಧನ, ಕುಬೇರಪ್ಪ.ಜಿ, ಹನಮೇಶ್.ಕೆ.ಆರ್, ನಾಗೇಶ್ ಬಾಬು, ಕೆ.ಆರ್.ಪ್ರಸನ್ನಕುಮಾರ್, ಸಿ.ಎಸ್.ಚಂದ್ರಭೂಪಾಲ್, ರವಿಕುಮಾರ್, ಮಂಜುನಾಥ್ ಬ್ಯಾಣದ್, ಜಿ.ಶೇಖರಪ್ಪ ಮೊದಲಾದವರು ಉಪಸ್ಥಿತರಿದ್ದರು.