ಸಾರಾಂಶ
ಚಿತ್ರದುರ್ಗ ತಾಲೂಕಿನ ಜಿ.ಆರ್.ಹಳ್ಳಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಗೆ ಡಯಟ್ ಉಪನ್ಯಾಸಕರ ತಂಡ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ದ್ವಿಭಾಷಾ ನಿಘಂಟು ಪ್ರದರ್ಶಿಸಿದರು.
ಕಲಿಕಾ ಕಿಟ್ ಬಳಕೆ ಕುರಿತ ಪರಿಶೀಲನೆಯಲ್ಲಿ ಬಸವರಾಜ್ ಸಲಹೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಕ್ಕಳಲ್ಲಿ ಕಲಿಕಾ ಸಮಸ್ಯೆಗಳನ್ನು ಗುರುತಿಸಲು ಶಿಕ್ಷಕರು ಸಂಶೋಧನಾ ಗುಣ ಬೆಳೆಸಿಕೊಳ್ಳಬೇಕು ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.ಚಿತ್ರದುರ್ಗ ತಾಲೂಕಿನ ಜಿ.ಆರ್ ಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಗಣಿತ ಕಲಿಕಾ ಕಿಟ್ ಬಳಕೆ ವಿದ್ಯಾರ್ಥಿಗಳ ಕಲಿಕಾ ಸಾಧನೆ ಕುರಿತು 5 ನೇ ತರಗತಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಶಿಕ್ಷಕರು ಅಧ್ಯಯನ, ಅಧ್ಯಾಪನ, ಸಂಶೋಧನಾ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಜಿಲ್ಲೆಯ 1201ಶಾಲೆಗಳಿಗೆ 1991 ಗಣಿತ ಕಿಟ್‍ಗಳನ್ನು ನೀಡಲಾಗಿದೆ. ಈ ಸಂಬಂಧ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗಣಿತ ಕಲಿಕಾ ಆಂದೋಲನ ಆನ್‍ಲೈನ್ ಕೋರ್ಸ್ ಸಂಪನ್ಮೂಲವನ್ನು ದೀಕ್ಷಾ ಪೋರ್ಟ್‍ಲ್‍ನಲ್ಲಿ ಅಳವಡಿಸಿದ್ದು ಕಿಟ್ ಬಳಕೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಕಲಿಕಾ ಸಾಮಗ್ರಿಗಳ ಬಳಕೆ ಮಾಡಿ ಬೋಧಿಸುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ. ಗಣಿತ ಕಿಟ್‍ನಲ್ಲಿನ ಸಾಮಗ್ರಿಗಳನ್ನು ತರಗತಿ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡುವುದರಿಂದ ಪರಿಕಲ್ಪನೆಗಳನ್ನು ಮಕ್ಕಳು ಸುಲಭವಾಗಿ ಅರ್ಥೈಸಿಕೊಳ್ಳುತಾರೆ ಎಂದು ತಿಳಿಸಿದರು.ಉಪನ್ಯಾಸಕ ಯು.ಸಿದ್ದೇಶಿ ಮಾತನಾಡಿ, ಶಿಕ್ಷಕರು ವಿಜ್ಞಾನ ಪ್ರಯೋಗ ಚಟುವಟಿಕೆಗಳನ್ನು ಕಲಿಕೆಗೆ ಪೂರಕವಾಗಿ ನಿರ್ವಹಣೆ ಮಾಡಿದ್ದಾರೆ. ಡಿಎಸ್ಇಆರ್ ಟಿ ಮತ್ತು ಬಾಲ ರಕ್ಷಾ ಭಾರತ್ ಎನ್ ಜಿಒ ಸಂಸ್ಥೆ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊರತಂದಿರುವ ನಿಘಂಟುಗಳನ್ನು ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕಿ ಕೆ.ಟಿ ನೇತ್ರಾವತಿ, ಶಿಕ್ಷಕರಾದ ಆರ್.ಟಿ ಉಮಾ, ಬಿ.ಶೈಲಜ, ಆರ್.ಎಂ.ಗಿರಿಜಮ್ಮ, ಜಿ.ವಿ.ನಿರ್ಮಲ, ಎ.ತಸ್ಮಿಯ, ವಿ.ಚನ್ನಕೇಶವಮೂರ್ತಿ, ವಿ.ಹೆಚ್ ನೇತ್ರಮ್ಮ, ಎಸ್.ದಿವ್ಯಜ್ಯೋತಿ, ಕೆ.ಎಸ್.ಚೇತನ್ ಕುಮಾರ್, ನಂದಿನಿ ಇದ್ದರು.