ಸಾರಾಂಶ
ನಮ್ಮ ಬೇಡಿಕೆ ಸಂವಿಧಾನ ಬದ್ಧವಾಗಿದೆ. ಆದರೆ, ಮುಖ್ಯಮಂತ್ರಿಗಳು ಬೇಡಿಕೆಯೇ ಸಂವಿಧಾನ ವಿರೋಧಿ ಎಂದಿದ್ದು ಖಂಡನೀಯ. ಡಾ. ಬಿ.ಆರ್. ಅಂಬೇಡ್ಕರ್ ಬರೀ ಇವರ ಸ್ವತ್ತಲ್ಲ. ಅಂಬೇಡ್ಕರ್ ಹಾಗೂ ಅವರ ಸಂವಿಧಾನ ನಮಗೂ ಅನ್ವಯ ಆಗುತ್ತದೆ.
ಧಾರವಾಡ:
ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರು, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಷಯವಾಗಿ ಸುವರ್ಣಸೌಧ ಎದುರು ನಡೆದ ಪ್ರತಿಭಟನೆ ವೇಳೆ ನಡೆದ ಲಾಠಿ ಚಾರ್ಜ್ ವಿರೋಧಿಸಿ ಗುರುವಾರ ಇಲ್ಲಿಯ ಜ್ಯೂಬಿಲಿ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಮ್ಮ ಬೇಡಿಕೆ ಸಂವಿಧಾನ ಬದ್ಧವಾಗಿದೆ. ಆದರೆ, ಮುಖ್ಯಮಂತ್ರಿಗಳು ಬೇಡಿಕೆಯೇ ಸಂವಿಧಾನ ವಿರೋಧಿ ಎಂದಿದ್ದು ಖಂಡನೀಯ. ಡಾ. ಬಿ.ಆರ್. ಅಂಬೇಡ್ಕರ್ ಬರೀ ಇವರ ಸ್ವತ್ತಲ್ಲ. ಅಂಬೇಡ್ಕರ್ ಹಾಗೂ ಅವರ ಸಂವಿಧಾನ ನಮಗೂ ಅನ್ವಯ ಆಗುತ್ತದೆ. ಹೋರಾಟದಿಂದಲೇ ನಮ್ಮ ಸಮಾಜ 2ಎ ಮೀಸಲಾತಿ ಪಡೆದುಕೊಳ್ಳಲು ಪ್ರಯತ್ನಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದೇ ಇದ್ದರೆ ಏನಂತೆ, ಮುಂದೆ ಇನ್ನೊಬ್ಬ ಮುಖ್ಯಮಂತ್ರಿ ಬರುತ್ತಾರೆ. ಅವರಿಂದಲೇ ನಾವು ಮೀಸಲಾತಿ ಪಡೆಯುತ್ತೇವೆ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.ಇದೇ ಸಂದರ್ಭದಲ್ಲಿ ಜ್ಯುಬಿಲಿ ವೃತ್ತವನ್ನು ಕೆಲ ಹೊತ್ತು ಬಂದ್ ಮಾಡಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಿಂಗಣ್ಣ ಕರೀಕಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರದೀಪಗೌಡ ಪಾಟೀಲ, ಸಿ.ಎಸ್. ನೇಗಿನಾಳ, ಎನ್.ಆರ್. ಬಾಳಿಕಾಯಿ, ಮುತ್ತಣ್ಣ ಬಳ್ಳಾರಿ, ಮಂಜುನಾಥ ಮುಗ್ಗನವವರ, ರಾಜಶೇಖರ ಮೆಣಸಿನಕಾಯಿ, ಶಶಿಶೇಖರ ಡಂಗನವರ, ಆನಂದ ಗಡೇಕರ, ಶ್ರೀಶೈಲಗೌಡ ಕಮತರ, ಅಜ್ಜಪ್ಪ ಗುಲಾಲದವರ, ಬಿ.ಎಂ. ಸೂರಗೊಂಡ, ಚಂದ್ರಗೌಡ ಖಾನಗೌಡ್ರ, ಜ್ಯೋತಿ ಪಾಟೀಲ, ಬಸವರಾಜ ಲೋಕೂರ, ಪ್ರಕಾಶ ಭಾವಿಕಟ್ಟಿ, ಸಂತೋಷ ಬೆಟಗೇರಿ, ಶಿವು ಹಿರೇಮಠ, ಮೋಹನ ರಾಮದುರ್ಗ, ರೂಪಾ ಕೆಂಗಾನೂರ ಮತ್ತಿತರರು ಇದ್ದರು.ಮುಖ್ಯಮಂತ್ರಿಗಳು ಸುಳ್ಳು ಹೇಳಿ ಪಂಚಮಸಾಲಿ ಮೀಸಲಾತಿ ಹೋರಾಟದ ಹಾದಿ ತಪ್ಪಿಸುತ್ತಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಹೇಗೆ ಪಡೆಯಬೇಕು ಎಂಬುವುದು ನಮಗೂ ಗೊತ್ತು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.