ಅಕ್ರಮ ಮದ್ಯ ಮಾರಾಟ: ಗ್ರಾಮಸ್ಥರಿಂದ ತಕ್ಕ ಪಾಠ

| Published : Oct 09 2023, 12:45 AM IST

ಅಕ್ರಮ ಮದ್ಯ ಮಾರಾಟ: ಗ್ರಾಮಸ್ಥರಿಂದ ತಕ್ಕ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ಕೊಡದಗುಡ್ಡ ಗ್ರಾಮದಲ್ಲಿ ಘಟನೆ, ಮಹಿಳೆಯರಿಂದ ಆಣೆ ಮಾಡಿಸಿದ ಮುಖಂಡರು, ಅಬಕಾರಿ, ಪೊಲೀಸರು

ಜಗಳೂರು ತಾಲೂಕಿನ ಕೊಡದಗುಡ್ಡ ಗ್ರಾಮದಲ್ಲಿ ಘಟನೆ, ಮಹಿಳೆಯರಿಂದ ಆಣೆ ಮಾಡಿಸಿದ ಮುಖಂಡರು, ಅಬಕಾರಿ, ಪೊಲೀಸರು

ಕನ್ನಡಪ್ರಭ ವಾರ್ತೆ ದಾವಣಗೆರೆ

ಪವಿತ್ರ ಪುಣ್ಯಕ್ಷೇತ್ರವೆಂದೇ ಗುರುತಿಸಲ್ಪಡುವ ಜಗಳೂರು ತಾಲೂಕಿನ ಕೊಡದಗುಡ್ಡ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ಗ್ರಾಮಸ್ಥರು ಇನ್ನು ಮುಂದೆ ಮದ್ಯ ಮಾರುವುದಿಲ್ಲವೆಂದು ಗ್ರಾಮದ ಪವಾಡ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿ ಮೇಲೆ ಆಣೆ ಮಾಡಿಸಿದ ಘಟನೆ ವರದಿಯಾಗಿದೆ.

ಜಗಳೂರು ತಾಲೂಕು ಕೊಡದಗುಡ್ಡ ಗ್ರಾಮ ಶ್ರೀ ವೀರಭದ್ರೇಶ್ವರ ಸ್ವಾಮಿ ಕಲ್ಲಿನಲ್ಲಿ ಒಡ ಮೂಡಿರುವ ಪುಣ್ಯಕ್ಷೇತ್ರವೆಂದು ಗುರುತಿಸಿ, ಪೂಜಿಸಲ್ಪಡುತ್ತದೆ. ಅಂತಹ ಊರಿನಲ್ಲಿ ಕೆಲ ಮನೆ, ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ರೋಸಿ ಹೋಗಿದ್ದರು. ಈ ಬಗ್ಗೆ ಅಕ್ರಮ ಮದ್ಯ ಮಾರಾಟಗಾರರಿಗೆ ಸಾಕಷ್ಟು ಬಾರಿ ಗ್ರಾಮಸ್ಥರು, ದೇವಸ್ಥಾನ ಸಮಿತಿಯವರು ಮದ್ಯ ಮಾರಾಟಗಾರರಿಗೆ ಬುದ್ಧಿವಾದ ಹೇಳಿದ್ದರೂ ಮದ್ಯ ಮಾರಾಟದಲ್ಲಿ ತೊಡಗಿದ್ದರು. ಕೊನೆಗೆ ಗ್ರಾಮಸ್ಥರೆಲ್ಲರೂ ಸೇರಿ ಜಗಳೂರು ತಾಲೂಕು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ತಮ್ಮ ಊರಿನಲ್ಲಿ ಮದ್ಯ ಮಾರಾಟಕ್ಕೆ ಅಂತ್ಯ ಹಾಡಲು ಮನವಿ ಮಾಡಿ, ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಮಸ್ಥರಿಗೆ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಹಲವು ಸಂಘಟನೆಗಳು ಬೆಂಬಲವನ್ನು ಸೂಚಿಸಿದ್ದರು. ಪರಿಣಾಮ ಕೊಡದಗುಡ್ಡ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅಂತ್ಯ ಹಾಡಲು ಎಲ್ಲರೂ ಒಕ್ಕೊರಲಿನಿಂದ ಧ್ವನಿ ಎತ್ತಿದರು. ಅಬಕಾರಿ ಇಲಾಖೆ ಡಿವೈಎಸ್ಪಿ ಶೀಲಾ, ಬಿಳಿಚೋಡು ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ, ಕೊಡದಗುಡ್ಡ ಗ್ರಾಮಕ್ಕೆ ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಅನಂತಮೂರ್ತಿ ನಾಯಕ್‌, ಕಾಂಗ್ರೆಸ್ ಮುಖಂಡರಾದ ಬಸವಾಪುರದ ರವಿಚಂದ್ರ, ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಟಿ.ಪ್ರಕಾಶ ಸೇರಿ ಅನೇಕರು ಗ್ರಾಮಕ್ಕೆ ಧಾವಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕೆಂಬ ಧ್ವನಿ ಎತ್ತಿದರು.

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ಗ್ರಾಮಸ್ಥರಷ್ಟೇ ಅಲ್ಲ, ಅಬಕಾರಿ, ಪೊಲೀಸ್ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಬುದ್ಧಿ ಹೇಳಿದ್ದಲ್ಲದೇ, ಜೀವನೋಪಾಯಕ್ಕೆ ನ್ಯಾಯದ ಹಾದಿ ಹಿಡಿಯಲು ತಿಳಿ ಹೇಳಿದರು. ನಂತರ ಯಾವುದೇ ಕಾರಣಕ್ಕೂ, ಎಂತಹದ್ದೇ ಪರಿಸ್ಥಿತಿಯಲ್ಲೂ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದಿಲ್ಲವೆಂದು ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಮಾಣ ಮಾಡಿಸಲಾಯಿತು. ಕಡೆಗೂ ಮದ್ಯ ಮಾರಾಟ ಮಾಡುವುದಿಲ್ಲವೆಂದು ಮದ್ಯ ಮಾರುತ್ತಿದ್ದ ಮಹಿಳೆಯರು ಆಣೆ ಮಾಡಿದ ನಂತರ ಗ್ರಾಮಸ್ಥರು ಕರತಾಡನ ಮಾಡಿ ಬೆಂಬಲ ಸೂಚಿಸಿದರು. ಮತ್ತೆ ಎಂದೂ ಮದ್ಯ ಮಾರಲ್ಲವೆಂದು ಆಣೆ

ಶ್ರೀ ವೀರಭದ್ರೇಶ್ವರ ಸ್ವಾಮಿಯ ಮೇಲೆ ಆಣೆ ಮಾಡಿ ಹೇಳುತ್ತೇವೆ. ಇನ್ನು ಮುಂದೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಹಾಲು ಮಾರಾಟ ಮಾಡಿ, ಕೃಷಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತೇವೆ. ಮತ್ತೆ ಎಂದಿಗೂ ಮದ್ಯ ಮಾರುವುದಿಲ್ಲವೆಂದು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯರು ದೇವರ ಮೇಲೆ ಆಣೆ, ಪ್ರಮಾಣ ಮಾಡಿದರು.