ನವಲಗುಂದ:

ಪಟ್ಟಣದ ಪಂಚಗ್ರಹ ಹಿರೇಮಠಕ್ಕೆ ನೂತನ ಪೀಠಾಧಿಪತಿ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಪಂಚ ಪೀಠಾಧೀಶರರು, ಸಾವಿರಾರು ಭಕ್ತರು ಸಾಕ್ಷಿಯಾದರು. ಮಠದ ಹಿರಿಯ ಸಿದ್ದೇಶ್ವರ ಶಿವಾಚಾರ್ಯರಿಗೆ ತರುವಾಯ ಇವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ.

ಬಳಿಕ ನೆರವೇರಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀ, ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ ನಿಂತು ಶಾಂತಿ ಸಾಮರಸ್ಯ ಮೂಡಿಸುವ ಕೆಲಸ ಮಠಗಳಿಂದ ನಡೆಯಬೇಕು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮದ ಗುರಿಯಾಗಿದೆ ಎಂದರು.

ಧರ್ಮ ಸಂಸ್ಕೃತಿ ಮತ್ತು ತತ್ವ ಸಿದ್ಧಾಂತ ಪರಂಪರೆಗಳ ತಾಯ್ನಾಡು ಭಾರತ. ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡಲಾರದಿರುವವನು ನಿಜವಾದ ಧರ್ಮಾತ್ಮ. ನದಿ, ಸಮುದ್ರಗಳನ್ನು ಸೇತುವೆ ಮೂಲಕ, ಗುಡ್ಡ-ಬೆಟ್ಟಗಳನ್ನು ಸುರಂಗ ಮಾರ್ಗ ನಿರ್ಮಿಸಿ ದಾಟಬಹುದು. ಆದರೆ, ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆ ದಾಟುವುದು ತುಂಬಾ ಕಷ್ಟ. ಗಾಡಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡುವುದೇ ಧಾರ್ಮಿಕ ಕೇಂದ್ರಗಳ ಮುಖ್ಯ ಗುರಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾನವೀಯ ಸಂಬಂಧ ಸದೃಢಗೊಳಿಸಲು ಆಯಾ ಕಾಲಘಟ್ಟಗಳಲ್ಲಿ ಆಚಾರ್ಯರು, ಋಷಿಮುನಿಗಳು, ಸಂತ, ಮಹಾತ್ಮರು ಅವತರಿಸಿ ಬಾಳಿಗೆ ಬೆಳಕು ತೋರಿಸಿದ್ದಾರೆ ಎಂದು ಹೇಳಿದರು.


ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಮರೆಯುವುದು ಮನುಷ್ಯನ ಗುಣ. ಮರೆತು ಹೋದುದನ್ನು ನೆನಪು ಮಾಡಿಕೊಡುವುದೇ ಮಠಗಳ ಕೆಲಸ. ಶಿವಜ್ಞಾನದ ಅರಿವನ್ನು ಉಂಟು ಮಾಡುವುದೇ ಗುರು ಧರ್ಮವಾಗಿದೆ. ಮಠಗಳು ಸಂಸ್ಕಾರ, ಸಚ್ಚಾರಿತ್ರ್ಯ ಬೋಧಿಸುವ ಕೇಂದ್ರಗಳಾಗಬೇಕು ಎಂದರು.

ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಯೋಗಿ, ಭೋಗಿ ಮತ್ತು ರೋಗಿ ಯಾವಾಗಲೂ ಎಚ್ಚರವಾಗಿರುತ್ತಾರೆ. ಯೋಗಿ ಸಾಧನೆಗಾಗಿ, ಭೋಗಿ ಇಂದ್ರಿಯ ಸುಖಕ್ಕಾಗಿ, ರೋಗಿ ವೇದನೆಯಿಂದ ಎಚ್ಚರವಾಗಿರುತ್ತಾರೆ ಎಂದು ತಿಳಿಸಿದರು.

ನವಲಗುಂದ ಪಂಚಗ್ರಹ ಹಿರೇಮಠದ ನೂತನ ಪೀಠಾಧ್ಯಕ್ಷ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ಪೂರ್ವ ಜನ್ಮದ ಸುಕೃತ ಮತ್ತು ಸಿದ್ದೇಶ್ವರ ಶಿವಾಚಾರ್ಯರ ಆಶೀರ್ವಾದದಿಂದ ಶ್ರೀಮಠದ ಪಟ್ಟಾಧ್ಯಕ್ಷನಾಗಿರುವೆ. ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದಿಂದ ಶ್ರೀಮಠದ ಅಭಿವೃದ್ಧಿ, ಭಕ್ತರಿಗೆ ಸಂಸ್ಕಾರ ಮತ್ತು ಗುಣಾತ್ಮಕ, ರಚನಾತ್ಮಕ ಕಾರ್ಯ ಮಾಡುವುದಾಗಿ ಸಂಕಲ್ಪ ಕೈಕೊಂಡರು.

ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಮತ್ತಿತರರಿದ್ದರು.