ಗಜೇಂದ್ರಗಡ: ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿ ತನ್ನ ಎದೆಹಾಲು ಉಣಿಸುವುದರ ಮೂಲಕ ಮಗುವಿಗೆ ಬರಬಹುದಾದ ಎಲ್ಲ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ತಜ್ಞ ಡಾ. ವೀರೇಶ ಎಲಿಮಠ ತಿಳಿಸಿದರು.
ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಸೂಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆರಿಗೆಯಾದ ನಂತರ ಮಗು ಅತ್ತಾಗಲೆಲ್ಲ ಎದೆಹಾಲು ಉಣಿಸುವುದರಿಂದ ಮಗು ದೈಹಿಕ, ಮಾನಸಿಕ ಹಾಗೂ ಸದೃಢವಾಗಿ ಬೆಳೆಯುತ್ತದೆ. ತಾಯಿ ಮತ್ತು ಮಗುವಿನ ನಡುವೆ ಗಟ್ಟಿಯಾದ ಬಾಂಧವ್ಯ ಬೆಸೆವುದಲ್ಲದೆ ತಾಯಿಯ ದೈಹಿಕ ಸೌಂದರ್ಯ ವೃದ್ಧಿಸುತ್ತದೆ. ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳನ್ನು ಕೂಡ ತಡೆಗಟ್ಟುತ್ತದೆ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರ ಕಾಪಾಡಿಕೊಂಡಲ್ಲಿ ತಾಯಿ ಮತ್ತು ಮಗು ಸದೃಢವಾಗಿರುತ್ತದೆ. ಆರೋಗ್ಯ ಇಲಾಖೆಯಲ್ಲಿ ತಾತ್ಕಾಲಿಕ ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳು ಲಭ್ಯವಿರುತ್ತವೆ. ಅವುಗಳನ್ನು ಬಳಸಿಕೊಳ್ಳಬೇಕೆಂದರು. ಪ್ರಾಥಮಿಕ ಆರೋಗ್ಯ ಕೇಂದ್ರ ಸೂಡಿಯ ಆಡಳಿತ ವೈದ್ಯಾಧಿಕಾರಿ ಡಾ. ಶರಣು ಗಾಣಿಗೇರ ಮಾತನಾಡಿ, ಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತ್ಯುತ್ತಮ ಹೆರಿಗೆ ಸೇವೆ ನೀಡುತ್ತಿದ್ದು, ಇಡೀ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚು ಹೆರಿಗೆಗಳು ನಮ್ಮ ಆಸ್ಪತ್ರೆಯಲ್ಲಿಯಾಗಿವೆ ಎಂದರು. ಈ ವೇಳೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ದಿಲ್‌ಶಾದ ಮುಲ್ಲಾ, ಶಾಹಿದಾ ಡಾಲಾಯತ, ವಿಜಯಲಕ್ಷ್ಮಿ ಪೊಲೀಸಪಾಟೀಲ್, ಶಿವಲೀಲಾ ಲಾಲಗುಂದಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಬಸನಗೌಡ ಪಾಟೀಲ್, ಪರಮಾನಂದ, ರೇಷ್ಮಾ ಪವಾರ, ಪೂರ್ಣಿಮಾ ಪಿ., ಮಹೇಶ್ ಹಿರೇಮಠ ಇತರರು ಇದ್ದರು.ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ
ಹೆರಿಗೆಯಾದ ನಂತರ ಮಗು ಅತ್ತಾಗಲೆಲ್ಲ ಎದೆಹಾಲು ಉಣಿಸುವುದರಿಂದ ಮಗು ದೈಹಿಕ, ಮಾನಸಿಕ ಹಾಗೂ ಸದೃಢವಾಗಿ ಬೆಳೆಯುತ್ತದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.