ಗದಗ: ಭಕ್ತಿಪಂಥದ ಸಂತರು, ಶರಣರು, ದಾಸರು ಮಾನವೀಯ ಮೌಲ್ಯಗಳು, ಸಮಾನತೆ, ಸಹಿಷ್ಣುತೆ ಮತ್ತು ಭಕ್ತಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಮುಳಗುಂದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಎಂ. ಶಿರೂರ ತಿಳಿಸಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ, ಐಕ್ಯುಎಸಿ ಅಡಿಯಲ್ಲಿ ಆಯೋಜಿಸಿದ್ದ ಭಕ್ತಿ ಪಂಥದ ದಾರ್ಶನಿಕರು, ಜೀವನ ಮತ್ತು ಬೋಧನೆಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿ ಚಳವಳಿಯು ಸಮಾಜದ ಅಂಧಶ್ರದ್ಧೆ, ಜಾತಿಭೇದ, ಅಸಮಾನತೆ ವಿರುದ್ಧ ಧ್ವನಿಯೆತ್ತಿ ಮಾನವ ಧರ್ಮದ ಮಹತ್ವ ಸಾರಿದ ಚಳವಳಿಯಾಗಿದೆ ಎಂದರು.ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ, ಅಕ್ಕಮಹಾದೇವಿಯ ವೈರಾಗ್ಯ, ಅಲ್ಲಮಪ್ರಭುವಿನ ಆಧ್ಯಾತ್ಮಿಕತೆ, ಪುರಂದರದಾಸರ ಭಕ್ತಿ, ಕನಕದಾಸರ ಮಾನವೀಯತೆ, ಸಂತ ಕಬೀರರ ಜಾತಿಮತ ವಿರೋಧ, ಗುರುನಾನಕರ ಮಾನವ ಸೇವೆ, ಮೀರಾಬಾಯಿಯ ಕೃಷ್ಣನ ಭಕ್ತಿ, ತುಳಸಿದಾಸರ ಸತ್ಯಮಾರ್ಗ, ಚೈತನ್ಯ ಮಹಾಪ್ರಭುವಿನ ಕೃಷ್ಣಭಕ್ತಿ, ತುಕಾರಾಮರ ನೈತಿಕ ಬದುಕು, ನಾಮದೇವನ ಸಮಾನತೆ, ರಾಮಾನುಜಾಚಾರ್ಯರ ಭಕ್ತಿಮಾರ್ಗ, ಮಧ್ವಾಚಾರ್ಯರ ವಿಷ್ಣುಭಕ್ತಿ, ವಲ್ಲಭಾಚಾರ್ಯರ ಪುಷ್ಟಿಮಾರ್ಗ ಸಂದೇಶಗಳು ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ, ನೈತಿಕತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಸಾರ್ವಕಾಲಿಕ ಚಿಂತನೆಗಳಾಗಿವೆ ಎಂದರು.ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಭಕ್ತಿ ಚಳವಳಿ ಬೆಳವಣಿಗೆಯಾಗಿದ್ದು, ಈ ಚಳವಳಿಯ ದಾರ್ಶನಿಕರು ಭಕ್ತಿ, ಸಮಾನತೆ, ಮಾನವತೆ, ದೈವಪ್ರೇಮ, ಸಾಮಾಜಿಕ ಸುಧಾರಣೆಯ ಸಂದೇಶಗಳನ್ನು ಸಾರಿದ ಮಹಾನ್ ಸಂತರು ಮತ್ತು ಚಿಂತಕರಾಗಿದ್ದು, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ದ್ವೇಷ, ಅಸಮಾನತೆ, ಮಾನಸಿಕ ಒತ್ತಡಗಳ ನಡುವೆ ಭಕ್ತಿ ದಾರ್ಶನಿಕರ ಸಂದೇಶಗಳು ಪ್ರಸ್ತುತವಾಗಿವೆ ಎಂದರು.
ಐಕ್ಯುಎಸಿ ಸಂಯೋಜಕ ಡಾ. ಜಿತೇಂದ್ರ ಜಾಗೀರದಾರ ಮಾತನಾಡಿದರು. ಪ್ರಾ. ಪ್ರೊ. ಸುಧಾ ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಇತಿಹಾಸ ವಿಭಾಗದ ಉಪನ್ಯಾಸಕ ಬಸವಂತಪ್ಪ ದೊಡ್ಡಮನಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ರೋಹಿಣಿ ರಾಚಣ್ಣವರ ವಂದಿಸಿದರು.