ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣಿನ ಸುಗ್ಗಿ ಪ್ರಾರಂಭವಾಗಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕಣ್ಣಿಗೆ ಮಾವಿನ ಹಣ್ಣುಗಳೇ ಕಾಣುತ್ತಿದ್ದು, ಬೆಲೆಯೂ ಇಳಿಕೆಯಾಗಿರುವುದರಿಂದ ಗ್ರಾಹಕರು ಖುಷಿಯಿಂದ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.

ಗದಗ ನಗರ ಗ್ರಾಮೀಣ ಭಾಗ ಸೇರಿ ರಾಜ್ಯದ ಬಹುತೇಕ ಪಟ್ಟಣ, ನಗರದ ಮಾರುಕಟ್ಟೆಗಳಲ್ಲಿ ಸ್ಥಳೀಯ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರದ ಮಾವಿನ ಹಣ್ಣು ಲಗ್ಗೆ ಇಟ್ಟಿದ್ದು, ವಿವಿಧ ತಳಿಯ ಮಾವು ಗ್ರಾಹಕರ ಮನ ಸೆಳೆಯುತ್ತಿವೆ.

ಸ್ಥಳೀಯ ಮಾವಿನಹಣ್ಣು ಮತ್ತು ಮಹಾರಾಷ್ಟ್ರದ ಕೊಲ್ಲಾಪುರದ ಮಾವಿನಹಣ್ಣುಗಳು ಗದಗ ನಗರ ಸೇರಿದಂತೆ ಡಂಬಳ ಹೋಬಳಿಯ ಗ್ರಾಮೀಣ ಭಾಗದ ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ವಿಶೇಷವಾಗಿ ರತ್ನಗಿರಿಯ ಆಪೂಸ್, ಮುಂಡರಗಿ ತಾಲೂಕಿನಲ್ಲಿ ಬೆಳೆದಿರುವ‌ ಮಾವಿಗೆ ಗ್ರಾಹಕರು ಫಿದಾ ಆಗುತ್ತಿದ್ದಾರೆ.

ಕುಸಿತವಾದ ದರ: ಆಪೂಸ್‌ ಸೇರಿದಂತೆ ವಿವಿಧ ತಳಿಯ ಮಾವು ಬೆಲೆ ದಿಢೀರನೆ ಕುಸಿದಿದೆ. ಮಂಗಳವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಮಾವಿನ ಹಣ್ಣುಗಳು ಡಜನ್‌ಗೆ ₹150ರಿಂದ ₹200, ದೊಡ್ಡ ಹಣ್ಣುಗಳು ₹250ರ ವರೆಗೂ ಮಾರಾಟವಾಗಿವೆ. ಕೆಲವು ದಿನದ ಹಿಂದೆ ಡಜನ್‌ಗೆ ₹300ರಿಂದ ₹450ರ ವರೆಗೆ ಮಾರಾಟವಾಗಿದ್ದು, ಆದರೆ ಮಂಗಳವಾರ ಮಾರುಕಟ್ಟೆಗೆ ಬೇರೆ ಬೇರೆ ಜಿಲ್ಲೆಯ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಆಗಮಿಸಿದ್ದು, ಇದರಿಂದ ದರ ಇಳಿಮುಖವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.


ಬೆಲೆ ಇಳಿಕೆಯಿಂದ ಗ್ರಾಹಕರು ಖುಷಿಯಿಂದ ಮಾವು ಖರೀದಿಗೆ ಮುಂದಾಗಿರುವುದು ಕಂಡುಬರುತ್ತಿದೆ. ಶುಚಿ ರುಚಿಯ ಮಾವಿನ ಹಣ್ಣಿಗೆ ಗದಗ, ಹುಲಕೋಟಿ, ಮುಂಡರಗಿ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದು, ಇಲ್ಲಿ ಬೆಳೆಯುವ ಮಾವಿಗೆ ಭಾರೀ ಬೇಡಿಕೆ ಇದೆ. ಮಾವಿನ ಹಂಗಾಮು ಜೋರಾಗಿದ್ದು, ಮಾರುಕಟ್ಟೆಯ ಮೂಲೆ ಮೂಲೆಗಳಲ್ಲಿ ಮಾವಿನ ಘಮ ಘಮ ಫಸರಿಸುತ್ತಿದೆ.ಈ ಬಾರಿ ಮುಂಡರಗಿ ಭಾಗದಲ್ಲಿ ಮಾವು ಬೆಳೆಗೆ ಉತ್ತಮ ವಾತಾವರಣ ಇದ್ದ ಕಾರಣ ಮಾವಿನ ಇಳುವರಿ ಉತ್ತಮವಾಗಿ ಬಂದಿದೆ. ಗ್ರಾಹಕರು ಮಾವು ಖರೀದಿಸುವಾಗ ಎಚ್ಚರ ವಹಿಸಬೇಕು. ರಾಸಾಯನಿಕದಿಂದ ಮಾಗಿಸಿದ ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಮಹಮ್ಮದ ರಫೀಕ ತಾಂಬೋಟಿ ತಿಳಿಸಿದರು.

ಗದಗ ಭಾಗದಲ್ಲಿ ರೈತರು ಬೆಳೆದ ಮಾವು ಮತ್ತು ಬೇರೆ ಬೇರೆ ರಾಜ್ಯದಿಂದ ಬಹಳಷ್ಟು ಬಂದ ಮಾವನ್ನು ಜಿಲ್ಲೆಯ ವಿವಿಧ ಹಳ್ಳಿಗಳಿಗೆ ತೆರಳಿ ಮಾರಾಟವನ್ನು ಮಾಡುತ್ತೇವೆ. ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಸ್ಥರಾದ ಮೈನುದ್ದಿನ ಆಲೂರ, ಇಮ್ತಿಯಾಜ್ ದಫೇದಾರ, ಕರೀಂ ಸರಖಾವಾಸ ತಿಳಿಸಿದರು.