ಕನ್ನಡಪ್ರಭ ವಾರ್ತೆ ವಿಜಯಪುರ

ಹಿಂದೂಸ್ತಾನ್ ಕೋಕಾ-ಕೋಲಾ (ಹೆಚ್‌ಸಿಸಿಬಿ) ಪ್ರಾಜೆಕ್ಟ್ ಶೈನ್ ಹಾಗೂ ಪಾಲುದಾರ ಎಸ್.ಎಂ.ಸೆಹಗಲ್ ಫೌಂಡೇಶನ್ ಸಹಯೋಗದೊಂದಿಗೆ ಸಿಎಸ್‌ಆರ್‌ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವ ಬಬಲೇಶ್ವರ ತಾಲೂಕಿನ ಐತಿಹಾಸಿಕ ಮಮದಾಪುರ ಕೆರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಿದರು.

ಈ ವೇಳೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, 400 ವರ್ಷಗಳ ಹಿಂದೆಯೇ ಆದಿಲ್ ಶಾಹಿ ಅರಸರು ಈ ಕೆರೆ ನಿರ್ಮಿಸಿ ಬೇರೆ ಕಡೆಯಿಂದ ಭತ್ತದ ತಳಿ ತಂದು ಇಲ್ಲಿ ನಾಟಿ ಮಾಡಿ ಇಲ್ಲಿನ ರೈತರು ಭತ್ತದ ಕೃಷಿ ಮಾಡಲು ಪ್ರೋತ್ಸಾಹ ನೀಡಿದ್ದರು. ಈ ಕೆರೆಯು ರಾಜ್ಯದಲ್ಲಿಯೇ 3ನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿದೆ. ನಾವು ಇಂಥ ಐತಿಹಾಸಿಕ ಕೆರೆಯನ್ನು ತುಂಬುವಾಗ ಅನೇಕರು ಕುಹಕವಾಡಿದ್ದರು. ಆದರೆ, ಈ ಕೆರೆಯನ್ನು ತುಂಬಿ ಈ ಭಾಗದ ಹಳ್ಳಿಗಳಿಗೆ ನೀರು ಒದಗಿಸುವ ಮೂಲಕ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತನ್ನು ಸಾಧಿಸಿ ತೋರಿಸಿದ್ದೇವೆ. ಈಗ ಈ ಐತಿಹಾಸಿಕ ಕೆರೆಯನ್ನು ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ಸಹಭಾಗಿತ್ವದಲ್ಲಿ ಸೌಂದರ್ಯೀಕರಣ ಮಾಡಿದರು. ಕೆರೆ ಸುತ್ತ ಸಾರ್ವಜನಿಕ ಉದ್ಯಾನವನ, ಸುಸಜ್ಜಿತ ನಡಿಗೆ ಮಾರ್ಗಗಳು, ಸೌರ ದೀಪಗಳು, ಪ್ರವೇಶ ಮಾರ್ಗಗಳು, ಸಮುದಾಯ ಆಸನ ಪ್ರದೇಶಗಳು ಹಾಗೂ ಹನಿನೀರಾವರಿಯೊಂದಿಗೆ ಸ್ಥಳೀಯ ಸಸಿಗಳ ನೆಡುವಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಮಹತ್ವದ ಕಾರ್ಯದಲ್ಲಿ ಕೈಜೋಡಿಸಿದ ಹೆಚ್‌ಸಿಸಿಬಿ ಹಾಗೂ ಅನುಷ್ಠಾನ ಪಾಲುದಾರರಿಗೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಅರ್ಪಿಸಿದರು.ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜ್ ಮುಖ್ಯ ಸಾರ್ವಜನಿಕ ವ್ಯವಹಾರಗಳು, ಸಂವಹನ ಮತ್ತು ಸುಸ್ಥಿರತೆ ಅಧಿಕಾರಿ ಹಿಮಾಂಶು ಪ್ರಿಯದರ್ಶಿ ಮಾತನಾಡಿ, ನಮ್ಮ ಸಂಸ್ಥೆ ದೇಶದ ಬೆಳವಣಿಗೆ ಗ್ರಾಮೀಣ ಪ್ರದೇಶಗಳಿಂದ ಪ್ರಾರಂಭವಾಗುತ್ತದೆ ಎಂದು ದೃಢವಾಗಿ ನಂಬಿದೆ. ಪ್ರಾಜೆಕ್ಟ್ ಶೈನ್ ಮೂಲಕ, ನಾವು ಸರ್ಕಾರದ ಹೊರತಾದ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ, ಸಮುದಾಯ-ಕೇಂದ್ರಿತ ಪರಿಹಾರಗಳನ್ನು ನೀಡುತ್ತೇವೆ. ಮಮದಾಪುರ ಸರೋವರದಲ್ಲಿನ ಈ ಉಪಕ್ರಮವು ಸಮುದಾಯ ಮಾಲೀಕತ್ವ ಮತ್ತು ಜವಾಬ್ದಾರಿಯುತ ಬಳಕೆಯನ್ನು ಪ್ರೋತ್ಸಾಹಿಸುತ್ತ ದೀರ್ಘಕಾಲೀನ ಸರೋವರ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಬೆಂಬಲಿತ ನೀರಿನ ಸಂರಕ್ಷಣಾ ಕ್ರಮಗಳ ಮೇಲೆ ಕೇಂದ್ರೀಕರಿಸುತ್ತದೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಎರಡು ಅತ್ಯಾಧುನಿಕ ಉತ್ಪಾದನೆ ಘಟಕಗಳನ್ನು ನಿರ್ವಹಿಸುವ ಮೂಲಕ ಕೋಕೋ ಕೋಲಾ ಕರ್ನಾಟಕದಲ್ಲಿ ಗಮನಾರ್ಹ ಹೆಜ್ಜೆಗುರುತನ್ನು ಹೊಂದಿದೆ. ತನ್ನ ಪ್ರಮುಖ ಸಮುದಾಯ ಪಾಲುದಾರಿಕೆ ಕಾರ್ಯಕ್ರಮವಾದ ಪ್ರಾಜೆಕ್ಟ್ ಶೈನ್ ಮೂಲಕ ನೀರಿನ ಸರಂಕ್ಷಣೆ, ಸಮುದಾಯ ಮೂಲಸೌಕರ್ಯ, ಪರಿಸರ ಸುಸ್ಥಿರತೆ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಜೀವನೋಪಾಯ ವರ್ಧನೆಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಸಿದರು.ಈ ಸಂದರ್ಭದಲ್ಲಿ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಮುಖಂಡರಾದ ಬಸವರಾಜ ದೇಸಾಯಿ, ಮಾಧವ ಕುಲಕರ್ಣಿ, ರಫೀಕ್ ಕಾನೆ, ಮಲ್ಲಿಕಾರ್ಜುನ ಗಂಗೂರ, ಲಕ್ಷ್ಮಣ ತೇಲಿ, ಈರಣ್ಣ ಕೊಪ್ಪದ, ಶಿವನಗೌಡ ಬಿರಾದಾರ, ಹಣಮಂತ ಹರಣಟ್ಟಿ, ಭರತ ಗಸ್ತಿ, ಶಂಕ್ರಪ್ಪ ಜನವಾಡ, ವೆಂಕಟೇಶ ಬಿರಾದಾರ, ಬಸಪ್ಪ ಭಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.