ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಪರಿಶಿಷ್ಟ ಪಂಗಡದ ಇಲಾಖೆಯಲ್ಲಿನ ಸರ್ಕಾರದ ₹ 187 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಇದು ತೀವ್ರ ಖಂಡನೀಯವಾಗಿದ್ದು, ತಕ್ಷಣ ಸಚಿವ ಸಂಪುಟದಿಂದ ನಾಗೇಂದ್ರರನ್ನು ಕೈ ಬಿಡದಿದ್ದರೆ ಅಧಿವೇಶನದ ವೇಳೆ ಬಿಜೆಪಿ ನಾಯಕರು ಸದನದ ಒಳಗೂ ಹಾಗೂ ಹೊರಗೂ ಹೋರಾಟ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಎಚ್ಚರಿಸಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ, ಜಮೀರ್ ಅಹಮ್ಮದ ಖಾನ, ಸಂತೋಷ ಲಾಡ ಇಂತಹವರನ್ನೇ ಮತ್ತೆ ಸಚಿವರನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಬಿಡದಿ ರಿಯಲ್ ಎಸ್ಟೇಟ್ ಬಗ್ಗೆ ಮಾತ್ರ ಗಮನಹರಿಸುತ್ತಿದ್ದಾರೆ. ಇದು ರಿಯಲ್ ಎಸ್ಟೇಟ್ ಸರ್ಕಾರವಾಗಿದೆ. ಸಂವಿಧಾನ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ರಾಹುಲ್ ಗಾಂಧಿ ಅವರಿಗೆ ಇದು ತಿಳಿದಿಲ್ಲವೆ?. ತಕ್ಷಣದಲ್ಲಿ ಬಿ.ನಾಗೇಂದ್ರ ರಾಜೀನಾಮೆ ಪಡೆಯದಿದ್ದರೆ ರಾಜ್ಯಾದ್ಯಂತ ನಿಮ್ಮ ಶಾಸಕರು, ಸಚಿವರು ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಓರ್ವ ಸರ್ಕಾರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಜನರು ನೋಡಿದ್ದಾರೆ. ಸಚಿವ ನಾಗೇಂದ್ರನ ಮೇಲೆ 36 ಕೇಸುಗಳು ನಡೆಯುತ್ತಿವೆ, ಇಷ್ಟಾಗಿಯೂ ಭ್ರಷ್ಟಾಚಾರ ಆಗಿಲ್ಲ ಎಂದು ವಾದಿಸುವ ಕಾಂಗ್ರೆಸ್ ಸರ್ಕಾರ ಭಂಡತನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ಧರಾಮಯ್ಯನವರು ಸಿಎಂ ಇದ್ದಾಗ ಅವರ ನಿವೇಶನದ ಬಗ್ಗೆ ಗೊತ್ತಾದಾಗ ಬಿಜೆಪಿ ನಾಯಕರೆಲ್ಲ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದ್ದಾರೆ. ಈ ಹೋರಾಟದಿಂದಲೇ ಸಿದ್ಧರಾಮಯ್ಯನವರು ನಿವೇಶನವನ್ನು ಸರ್ಕಾರಕ್ಕೆ ವಾಪಸ್ ನೀಡಿದರು. ಬಿಡದಿಯಲ್ಲೂ ಬಿಜೆಪಿ ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸಲಾಗುವುದು. ಈ ಹೋರಾಟ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಆಯಾಮವನ್ನು ಪಡೆಯಲಿದೆ. 2028ರ ಚುನಾವಣೆಯಲ್ಲಿ ಆಗುವ ಬದಲಾವಣೆಯನ್ನು ಎಲ್ಲರೂ ನೋಡಲಿದ್ದಾರೆ ಎಂದರು.ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿಕಾಂತ ವಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಳಿದ, ದಲಿತ ಸಮಾಜಕ್ಕೆ ಅನ್ಯಾಯ ಮಾಡುತ್ತಲೇ ಇದ್ದಾರೆ. ವಾಲ್ಮಿಕಿ ನಿಗಮದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ ನಾಗೇಂದ್ರ ಅವರನ್ನು ಸಚಿವ ಸಂಪುಟದಲ್ಲಿ ತೆಗೆದುಕೊಂಡಿದ್ದು, ಖಂಡನೀಯ. ನಿಗಮದಲ್ಲಿ ₹ 89 ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಅಂದಿನ ಸಿಎಂ ಸಿದ್ಧರಾಮಯ್ಯನವರೇ ಒಪ್ಪಿಕೊಂಡಿದ್ದರು. ಅಂತಹವರನ್ನು ಮತ್ತೆ ಸೇರಿಸಿಕೊಂಡಿದ್ದು, ಅಂದಿನ ಸಿಎಂ, ಡಿಸಿಎಂ, ಇಂದಿನ ಸಿಎಂ ಅವರು ಸೇರಿದಂತೆ ಎಲ್ಲರೂ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಂಕೆ ಇದೆ ಎಂದು ಹೇಳಿದರು.
300 ಮೀಟರ್ ಉದ್ದದ ತಿರಂಗಾ ಯಾತ್ರೆ:
ಇಂದು ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಆಗಸ್ಟ್ 13ರಂದು ಬೆಳಗ್ಗೆ 10 ಗಂಟೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್, ಬಸವೇಶ್ವರ ಚೌಕ್ ಮೂಲಕ ಡಾ.ಅಂಬೇಡ್ಕರ ಸರ್ಕಲ್‌ವರೆಗೆ 300 ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. 1000 ಅಡಿ ಉದ್ದದ ತಿರಂಗಾ ಯಾತ್ರೆಯಲ್ಲಿ ಎಲ್ಲ ರಾಷ್ಟ್ರಾಭಿಮಾನಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬು ಮಾಶಾಳ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ಗುನ್ಹಾಳಕರ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಇದ್ದರು.