ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ವಿಶೇಷ ಪ್ರಯತ್ನದಿಂದ ಜಿಲ್ಲೆಯಲ್ಲಿ ಮಹಿಳಾ ಮತದಾರರು ಹಾಗೂ ಯುವ ಮತದಾರರ ನೋಂದಣಿ ಸಂಖ್ಯೆ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪುರುಷ ಮತದಾರರ ನೋಂದಣಿಗಿಂತ ಮಹಿಳಾ ಮತದಾರರ ನೋಂದಣಿ ಪ್ರಮಾಣ ಕಡಿಮೆ ಇತ್ತು. ನೋಂದಣಿ ಅಭಿಯಾನದ ಮೂಲಕ ಮಹಿಳಾ ಮತದಾರರ ಪ್ರಮಾಣ ಹೆಚ್ಚಿಸಲಾಗಿದೆ. ಭಾರತ ಚುನಾವಣಾ ಆಯೋಗದ ಪ್ರಕಾರ ಯುವ ಮತದಾರರ ನೋಂದಣಿ ಪ್ರಮಾಣ ಶೇ.೩.೪ರಷ್ಟಾಗಬೇಕು. ಆದರೆ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಶೇ.೨.೭೯ರಷ್ಟಿದೆ. ಏಪ್ರಿಲ್ ವೇಳೆಗೆ ಶೇ.೩.೭ಕ್ಕಿಂತ ಅಧಿಕವಾಗಲಿದೆ ಎಂದು ತಿಳಿಸಿದರು.
ಮತದಾರರ ನೋಂದಣಿ ಪ್ರಮಾಣ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿ, ಡಿ. ೯ರವರೆಗೆ ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಕಾಲೋಚಿತಗೊಳಿಸಲು ೧೨-೦೧-೨೦೨೪ರವರೆಗೆ ಕಾಲಾವಕಾಶವಿದೆ. ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಜಿಲ್ಲಾದ್ಯಂತ ಜ.೨೨ರಂದು ಅಂತಿಮ ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆಗಳಲ್ಲಿ, ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಹಸೀಲ್ದಾರ, ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು ಎಂದರು.ಮತದಾರರ ಪಟ್ಟಿ ನಿರಂತರ ಸೇರ್ಪಡೆ ಅಡಿಯಲ್ಲಿ ಅರ್ಹ ಸಾರ್ವಜನಿಕರು ನಮೂನೆ-೬ರಲ್ಲಿ, ಹೆಸರು ಕಡಿಮೆಗೊಳಿಸಲು, ಹೆಸರು ಇತ್ಯಾದಿ ತಿದ್ದುಪಡಿ ಮತ್ತು ಹೆಸರು ವರ್ಗಾವಣೆ ಬಯಸಿದ್ದಲ್ಲಿ ನಮೂನೆ-೮ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಭರ್ತಿಮಾಡಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ(ಬಿಎಲ್‌ಓ)ರವರೊಗೆ ಸಲ್ಲಿಸಬಹುದು ಮತ್ತು ಮನೆಯಿಂದಲೇ ಮೊಬೈಲ್ ಮೂಲಕ ಭಾರತ ಚುನಾವಣಾ ಆಯೋಗದ ಅಧೀಕೃತ ಅಪ್ಲೀಕೇಷನ್ ಡೌನ್‌ಲೊಡ್ ಮಾಡಿಕೊಂಡು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ತಿಳಿಸಿದರು.
೧೩.೫ ಲಕ್ಷ ಮತದಾರರು:ಜಿಲ್ಲೆಯಲ್ಲಿ ೬,೬೫,೯೧೫ ಪುರುಷ, ೬,೩೯,೧೮೭ ಮಹಿಳಾ ಹಾಗೂ ೪೫ ಜನ ಇತರರು ಸೇರಿ ೧೩,೦೫,೧೪೭ ಮತದಾರರಿದ್ದಾರೆ ಈ ಪೈಕಿ ೧೮ ರಿಂದ ೧೯ ವರ್ಷದ ೨೩,೨೫೭ ಮತದಾರರಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ೧,೦೮,೫೧೦ ಪುರುಷ, ೧,೦೩,೨೦೫ ಮಹಿಳಾ ಹಾಗೂ ೪ ಇತರರು ಸೇರಿ ೨,೧೧,೭೧೯ ಮತದಾರರು, ಶಿಗ್ಗಾಂವಿ ಕ್ಷೇತ್ರದಲ್ಲಿ ೧,೧೭,೩೫೪ ಪುರುಷ, ೧,೧೦,೫೦೬ ಮಹಿಳಾ ಹಾಗೂ ೧೧ ಇತರರು ಸೇರಿ೨,೨೭,೮೭೧ ಮತದಾರರಿದ್ದಾರೆ. ಹಾವೇರಿ(ಎಸ್‌ಸಿ) ೧,೧೯,೬೦೪ ಪುರುಷ, ೧,೧೪,೪೧೭ ಮಹಿಳಾ ಹಾಗೂ ಎಂಟು ಇತರರು ಸೇರಿ೨,೩೪,೦೨೯ ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ ೧,೦೬,೨೯೯ ಪುರುಷ, ೧,೦೨,೯೫೫ ಮಹಿಳಾ ಹಾಗೂ ಏಳು ಇತರರು ಸೇರಿ೨,೦೯,೨೬೧ ಮತದಾರರಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ೯೫,೨೦೨ ಪುರುಷ, ೯೧,೦೯೪ ಮಹಿಳಾ ಹಾಗೂ ಮೂರು ಜನ ಇತರರು ಸೇರಿ ೧,೮೬,೨೯೯ ಮತದಾರರು ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ೧,೧೮,೯೪೬ ಪುರುಷ, ೧,೧೭,೦೧೦ ಮಹಿಳಾ ಹಾಗೂ ೧೨ ಜನ ಇತರರು ಸೇರಿ ೨,೩೫,೯೬೮ ಮತದಾರರಿದ್ದಾರೆ. ಒಂದು ಸಾವಿರ ಪುರುಷರಿಗೆ ೯೬೦ ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮತಗಟ್ಟೆ ಹೆಚ್ಚಳ:ವಿಧಾನಸಭಾ ಸಾರ್ವಜನಿಕ ಚುನಾವಣೆ-೨೦೨೩ರಲ್ಲಿ ಜಿಲ್ಲೆಯಲ್ಲಿ ೧೪೭೧ ಮತಗಟ್ಟೆಗಳಿದ್ದವು. ಪ್ರಸ್ತುತ ಜನಸಂಖ್ಯೆ ಆಧಾರದ ಮೇಲೆ ೧೧ ಮತಗಟ್ಟೆಗಳನ್ನು ಹೆಚ್ಚಿಸುವ ಮೂಲಕ ೧೪೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾನಗಲ್ ಕ್ಷೇತ್ರದಲ್ಲಿ ೨೪೩(ಮೊದಲು ೨೩೯), ಶಿಗ್ಗಾಂವಿ ಕ್ಷೇತ್ರದಲ್ಲಿ ೨೪೧( ಮೊದಲು೨೩೮), ಹಾವೇರಿ ಕ್ಷೇತ್ರದಲ್ಲಿ ೨೬೧(ಮೊದಲು ೨೫೭), ಬ್ಯಾಡಗಿ ಕ್ಷೇತ್ರದ್ಲಲಿ ೨೪೨, ಹಿರೇಕೆರೂರು ಕ್ಷೇತ್ರದಲ್ಲಿ೨೨೯ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಯುವ ಮತದಾರ ಸೇರ್ಪಡೆ:ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ ಜಿಲ್ಲೆಯಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಅರ್ಹತಾ ದಿನಾಂಕ ೧-೧-೨೦೨೪ಕ್ಕೆ ೧೮ ವರ್ಷ ಪೂರೈಸುವ ಸುಮಾರು ೨೮೩೭ ರಷ್ಟು ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿಗಳನ್ನು ಸ್ವೀಕರಿಸಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ೧೭ವರ್ಷ ಮೇಲ್ಪಟ್ಟವರನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸೇರ್ಪಗೊಳಿಸಲು ಯುವ ಮತದಾರರ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಕಾಲೋಚಿತಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜನವರಿ ೧ಕ್ಕೆ ೨,೮೩೭, ಏಪ್ರಿಲ್೧ಕ್ಕೆ ೩೦೭೦, ಜುಲೈ ೧ಕ್ಕೆ ೪೬೮೩ ಹಾಗೂ ಅಕ್ಟೋಬರ್ ೧ಕ್ಕೆ ೪೪೧೭ ಮತದಾರರು ಸೇರಿ ಅಕ್ಟೋಬರ್ ಅಂತ್ಯಕ್ಕೆ ೧೫,೦೦೭ ಯುವ ಮತದಾರರು ಸೇರ್ಪಡೆಗೊಳ್ಳಲಿದ್ದಾರೆ.ಚುನಾವಣಾಗೆ ಸಿದ್ಧತೆ: ಮತದಾರರ ಪಟ್ಟಿ ತಯಾರಿಕೆ ಪ್ರಗತಿ ಪ್ರರಿಶೀಲಿಸಲು ಚುನಾವಣಾ ಆಯೋಗವು ಮತದಾರರ ಪಟ್ಟಿ ವೀಕ್ಷಕರೆಂದು ಡಾ. ಆರ್.ವಿಶಾಲ್ ಅವರನ್ನು ನೇಮಕ ಮಾಡಿದ್ದು, ಅವರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.ಮುಂಬವರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಪ್ರದೇಶಗಳಲ್ಲಿ ಮತಯಂತ್ರಗಳ (ಇವಿಎಂ) ಕುರಿತು ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಇಡಿಸಿ ಏಳು ಕೇಂದ್ರಗಳು ಹಾಗೂ ಸೆಕ್ಟರ್ ಅಧಿಕಾರಿಗಳ ಮುಖಾಂತರ ೭೩ ಎಂಡಿವಿ ಮೂಲಕ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಉಪಸ್ಥಿತರಿದ್ದರು.