ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಹಾಸ್ಯ ಮತ್ತು ಗಂಭೀರ ಸಂದೇಶವನ್ನು ಹೊಂದಿರುವ ‘ಅಖಿಲ ಕರ್ನಾಟಕ ಕುಡುಕರ ಸಂಘ’ ಎಂಬ ಸಿನಿಮಾ ಗಾಂಧಿ ನಗರದಲ್ಲಿ ಸೆಟ್ಟೇರಿದ್ದು, ಶೀಘ್ರವೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಹಿರಿಯ ಹಾಸ್ಯ ಕಲಾವಿದ ಮೈಸೂರು ರಮಾನಂದ ತಿಳಿಸಿದ್ದಾರೆ.ನಗರದ ಸರಸ್ವತಿ ಪುರಂನಲ್ಲಿರುವ ಕಲ್ಪತರು ಅಭಿನಯ ತರಬೇತಿ ಸಂಸ್ಥೆ ಅಡಿಯಲ್ಲಿ ತಯಾರಾಗುತ್ತಿರುವ ಅಖಿಲ ಕರ್ನಾಟಕ ಕುಡುಕರ ಸಂಘ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಳ್ಳಿ ಬಟ್ಲು ಫಿಲಂಸ್ ಮತ್ತು ಕಲ್ಪತರು ಕ್ರಿಯೇಷನ್ ಲಾಂಛನದಲ್ಲಿ ಅಖಿಲ ಕರ್ನಾಟಕ ಕುಡುಕರ ಸಂಘ ಸಿನಿಮಾ ಮೂಡಿಬರಲಿದ್ದು, ಕುಡುಕರ ಕಷ್ಟ, ನಷ್ಟ, ನೋವು, ನಲಿವುಗಳ ಜೊತೆಗೆ, ಸರಕಾರ ನಡೆ, ಅದರಿಂದಾಬೇಕಿರುವ ಕ್ರಮಗಳ ಕುರಿತಂತೆ ಸಿನಿಮಾದ ಕಥೆ ಸಾಗಲಿದೆ. ಈ ಕಥೆ 2020ರಲ್ಲಿ ಸಿದ್ದಗೊಂಡು, ಫಿಲಂ ಚೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಲಾಗಿದೆ. ಕುಡಿತದ ಚಟಕ್ಕೆ ಬಲಿಯಾದವರ ಕಷ್ಟ, ನಷ್ಟಗಳ ಜೊತೆಗೆ, ಮದ್ಯಪಾನವನ್ನೇ ಆದಾಯದ ಮೂಲ ಮಾಡಿಕೊಂಡಿರುವ ಸರ್ಕಾರ ಯಾವ ಕ್ರಮ ಕೈಗೊಂಡರೆ ಕುಡಿತದಿಂದ ಮನುಷ್ಯನನ್ನು ದೂರ ಮಾಡಬಹುದು ಎಂಬ ಹಲವಾರು ವಿಚಾರಗಳು ಈ ಸಿನಿಮಾದಲ್ಲಿದೆ. ಶೀಘ್ರವೇ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದರು.
ಕಾಂಗ್ರೆಸ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಚಲನಚಿತ್ರ ನೋಡಿ ತಮ್ಮ ಮನಸ್ಸು ಪರಿವರ್ತನೆ ಮಾಡಿಕೊಂಡು ಆನೇಕ ಉದಾಹರಣೆಗಳು ನಮ್ಮ ಮುಂದಿವೆ. ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಯುವಜನತೆ ಕೃಷಿಯ ಕಡೆಗೆ ವಾಲಿದ್ದನ್ನು ನಾವು ನೋಡಬಹುದು. ಹಾಗಾಗಿ ಚಲನಚಿತ್ರದ ಮೂಲಕ ಮದ್ಯಪಾನ ಮತ್ತು ಅದರ ಹಿಂದಿನ ಆಗು ಹೋಗುಗಳ ಕುರಿತು ಹೇಳಲು ಹೊರಟಿರುವ ಆನಂದ ಕಲ್ಪತರು ನೇತೃತ್ವದ ಕಲ್ಪತರು ಕ್ರಿಯೇಷನ್ ನ ಈ ಪ್ರಯತ್ನ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.ಅಖಿಲ ಕರ್ನಾಟಕ ಕುಡುಕರ ಸಂಘ ಚಲನಚಿತ್ರದ ನಿರ್ದೇಶಕ ಆನಂದ ಕಲ್ಪತರು ಮಾತನಾಡಿ, ಕರೋನ ಸಂದರ್ಭದಲ್ಲಿ ಈ ಚಿತ್ರಕಥೆ ಸಿದ್ದಗೊಂಡು, ರಿಜಿಸ್ಟರ್ ಮಾಡಲಾಗಿತ್ತು. ಮುಂದಿನ ಫೆಬ್ರವರಿಯಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದರು.
ಈ ಸಿನಿಮಾಕ್ಕೆ ತುಮಕೂರಿನವರೇ ಆದ ವಿಷ್ಣುವರ್ಧನ್ ಅವರು ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದು, ಶೇ.70ರಷ್ಟು ಚಿತ್ರೀಕರಣ ತುಮಕೂರು ಸುತ್ತಮುತ್ತ ನಡೆಯಲಿದೆ. ಉಳಿದ ಮೂವತ್ತು ಭಾಗ ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ಕಲ್ಪತರು ಅಭಿನಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಹತ್ತಾರು ಕಲಾವಿದರು ಈ ಸಿನಿಮಾನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ ಎಂದರು.ಆಖಿಲ ಕರ್ನಾಟಕ ಕುಡುಕರ ಸಂಘ ಸಿನಿಮಾದ ನಿರ್ಮಾಪಕ ವಿಷ್ಣುವರ್ಧನ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಸಿನಿಮಾ ನಿರ್ಮಾಣದ ತಯಾರಿ ನಡೆದಿದೆ. ಮುಂದಿನ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಇದೊಂದು ವಿಭಿನ್ನ ಕಥಾವಸ್ತು. ಸಮಾಜದಲ್ಲಿ ಅತ್ಯಂತ ತುಚ್ಚವಾಗಿ ನೋಡುವ ಕುಡುಕರ ನೋವುಗಳ ಜೊತೆಗೆ, ಸಮಾಜದ ಜವಾಬ್ದಾರಿಯನ್ನು ಸಹ ಸಿನಿಮಾ ನೆನಪು ಮಾಡಿಕೊಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಪ್ರಕಾಶ್, ಚಲನಚಿತ್ರ ನಟ ಅರ್ಜುನ್ ಪಾಳ್ಳೇಗಾರ್, ಸಂಗೀತ ಶ್ರೀನಿವಾಸ್, ಗುರುಪ್ರಸಾದ್, ಸಂಜು, ಚಕ್ರವರ್ತಿ ಪ್ರಕಾಶ್, ಮೀಸೆ ಸತೀಶ್, ಕೃಷ್ಣಮೂರ್ತಿ, ಪತ್ರಕರ್ತರ ಸಂಘದ ಚಿ.ನಿ.ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.