ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರಲಾರಂಭಿಸಿದೆ. ಹೀಗಾಗಿ ವಿಜಯನಗರ ಜಿಲ್ಲಾಡಳಿತ ಈಗ ಸ್ಮಾರಕಗಳ ಬಳಿ ಟಿಕೆಟ್ ಕೌಂಟರ್‌ಗಳನ್ನು ಹೆಚ್ಚಳ ಮಾಡಿದ್ದು, ಪ್ರವಾಸಿಗರಿಗೂ ಅನುಕೂಲವಾಗಿದೆ.ಹಂಪಿ ಸ್ಮಾರಕಗಳ ವೀಕ್ಷಣೆಗೆ ದಿನೇ ದಿನೇ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಡಿ. 31ರಂದು ಒಂದು ಲಕ್ಷ ಪ್ರವಾಸಿಗರು ಆಗಮಿಸಿದ್ದರೆ, ಹೊಸ ವರ್ಷದ ಮೊದಲ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿ ವೀಕ್ಷಣೆಗೆ ಆಗಮಿಸಿದ್ದರು. ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿ ವೀಕ್ಷಣೆಗೆ ಆಗಮಿಸಿರುವ ಹಿನ್ನೆಲೆ ಟಿಕೆಟ್ ತೆಗೆದುಕೊಳ್ಳಲು ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಆಗ ಪರಿಶೀಲನೆ ನಡೆಸಿದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಭಾರತೀಯ ಪುರಾತತ್ವ ಇಲಾಖೆಗೆ ಇನ್ನಷ್ಟು ಟಿಕೆಟ್ ಕೌಂಟರ್‌ಗಳನ್ನು ತೆರೆಯಲು ಸೂಚಿಸಿದ್ದರು. ಈಗ ಮತ್ತೆ ಎರಡು ಟಿಕೆಟ್ ಕೌಂಟರ್‌ಗಳು ಆರಂಭಗೊಂಡಿವೆ.
ಟಿಕೆಟ್ ಕೌಂಟರ್‌ಗಳು: ದೇಶ- ವಿದೇಶಿ ಪ್ರವಾಸಿಗರಿಗೆ ಈಗ ಟಿಕೆಟ್ ಕೌಂಟರ್‌ಗಳು ಸಹಕಾರಿಯಾಗಿವೆ. ಹಂಪಿಗೆ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿರುವುದರಿಂದ ತಾಸುಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವ ತಾಪತ್ರಯ ತಪ್ಪಿದೆ. ದೂರದ ಊರುಗಳಿಂದು ಬರುವ ಪ್ರವಾಸಿಗರಿಗೆ ಸಮಯ ಹೊಂದಿಸಲು ಅನುಕೂಲವಾಗಿದ್ದು, ಬೇಗನೆ ಟಿಕೆಟ್ ಕೂಡ ಸಿಗುತ್ತದೆ. ಇನ್ನೂ ಆನ್‌ಲೈನ್‌ನಲ್ಲೂ ಟಿಕೆಟ್‌ಗಳು ಲಭ್ಯವಾಗುತ್ತಿವೆ.ಎಲ್ಲೆಲ್ಲಿ ಟಿಕೆಟ್ ಕೌಂಟರ್?: ಹಂಪಿಯ ಕಮಲ ಮಹಲ್, ಕಮಲಾಪುರದ ಪ್ರಾಚ್ಯವಸ್ತು ಸಂಗ್ರಹಾಲಯ ಬಳಿಯೂ ಟಿಕೆಟ್ ಕೌಂಟರ್ ಇದೆ. ಇನ್ನೂ ಈಗ ಹಂಪಿಯ ಗೆಜ್ಜಲ ಮಂಟಪ ಮತ್ತು ವಿಜಯ ವಿಠ್ಠಲ ದೇವಾಲಯದ ಪೂರ್ವದ್ವಾರದಲ್ಲಿ ಹೊಸದಾಗಿ ಮತ್ತೊಂದು ಟಿಕೆಟ್ ಕೌಂಟರ್ ಆರಂಭಿಸಲಾಗಿದೆ. ಈ ಹಿಂದೆ ವಿಜಯ ವಿಠ್ಠಲ ದೇವಾಲಯದ ಬಳಿ ಇದ್ದ ಟಿಕೆಟ್ ಕೌಂಟರ್‌ನ ಟಿಕೆಟ್ ಆನ್‌ಲೈನ್‌ನಲ್ಲಿ ದೊರೆಯುತ್ತಿರಲಿಲ್ಲ. ಈಗ ನೆಟ್‌ವರ್ಕ್ ದೊರೆಯುವ ಸ್ಥಳ ಗುರುತಿಸಿ ಪೂರ್ವದ್ವಾರದಲ್ಲಿ ಟಿಕೆಟ್ ಕೌಂಟರ್ ಆರಂಭಿಸಲಾಗಿದೆ.
ಟಿಕೆಟ್ ದರಗಳು: ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲ ಸ್ಮಾರಕಗಳ ವೀಕ್ಷಣೆಗೆ ಒಂದೇ ಕಡೆ ಟಿಕೆಟ್ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆಯಲ್ಲಿ ಟಿಕೆಟ್ ತೆಗೆದುಕೊಂಡರೆ ಹಂಪಿಯ ಎಲ್ಲ ಸ್ಮಾರಕಗಳನ್ನು ವೀಕ್ಷಣೆ ಮಾಡಬಹುದು. ದೇಶಿ ಪ್ರವಾಸಿಗರಿಗೆ ತಲಾ ಒಬ್ಬರಿಗೆ ₹40 ಮತ್ತು ವಿದೇಶಿ ಪ್ರವಾಸಿಗರಿಗೆ ತಲಾ ಒಬ್ಬರಿಗೆ ₹600 ಟಿಕೆಟ್ ದರ ನಿಗದಿಪಡಿಸಲಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಶುಲ್ಕ ಪಡೆಯಲಾಗುವುದಿಲ್ಲ.ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ವಿಜಯನಗರ ಜಿಲ್ಲಾಡಳಿತ ಕೂಡ ಹಲವು ಕ್ರಮಗಳನ್ನು ಕೈಗೊಂಡಿದೆ. ಜಿ- 20 ಶೃಂಗಸಭೆ ಬಳಿಕ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತಲೇ ಸಾಗಿದೆ. ಹಾಗಾಗಿ ಮೂಲ ಸೌಕರ್ಯಕ್ಕೆ ಜಿಲ್ಲಾಡಳಿತ ಕ್ರಮವಹಿಸಿದೆ.ಪ್ರವಾಸಿಗರಿಗೆ ಅನುಕೂಲ: ಹಂಪಿಯ ವಿಜಯವಿಠ್ಠಲ ದೇವಾಲಯದ ಪೂರ್ವದ್ವಾರ ಮುಚ್ಚಿತ್ತು. ಈಗ ಈ ದ್ವಾರ ಮತ್ತೆ ತೆರೆಯಲಾಗಿದ್ದು, ಈಗ ಟಿಕೆಟ್ ಕೌಂಟರ್ ಈ ದ್ವಾರದ ಬಳಿಯೇ ಆರಂಭಿಸಲಾಗಿದೆ. ಹಾಗಾಗಿ ಪ್ರವಾಸಿಗರಿಗೂ ಅನುಕೂಲವಾಗಿದೆ ಎಂದರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.
ಆನ್‌ಲೈನ್‌ನಲ್ಲಿ ಟಿಕೆಟ್: ಹಂಪಿಯಲ್ಲಿ ಟಿಕೆಟ್ ಕೌಂಟರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನೂ ಆನ್‌ಲೈನ್‌ನಲ್ಲೂ ಟಿಕೆಟ್ ಸಿಗುತ್ತಿದೆ. ಇಂತಹ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸಿದರೆ ಪ್ರವಾಸಿಗರು ಕೂಡ ಖುಷಿಯಾಗುತ್ತಾರೆ. ಈಗ ಕಳೆದ ಒಂದು ತಿಂಗಳಿನಿಂದ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಟಿಕೆಟ್ ಕೌಂಟರ್‌ಗಳ ಹೆಚ್ಚಳವೂ ಸಹಕಾರಿಯಾಗಿದೆ ಎಂದರು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿ. ವಿರೂಪಾಕ್ಷಿ.