ಸಾರಾಂಶ
2 ಚಿರತೆಗಳು ಪರಸ್ಪರ ಕಿತ್ತಾಟದಿಂದ ಮೃತಪಟ್ಟಿವೆ.
ಕನ್ನಡಪ್ರಭವಾರ್ತೆ ತುರುವೇಕೆರೆ
ಪರಸ್ಪರ ಕಿತ್ತಾಡಿಕೊಂಡು ಗಾಯಗೊಂಡಿದ್ದ ಎರಡು ಚಿರತೆಗಳು ಸಾವಿಗೀಡಾಗಿರುವ ಘಟನೆ ಸಮೀಪದ ಕುಣಿಕೇನಹಳ್ಳಿಯಲ್ಲಿ ನಡೆದಿದೆ.ಕುಣೀಕೇನಹಳ್ಳಿಯ ಜಯದೇವಮೂರ್ತಿ ಎಂಬುವವರ ಹಿಡುವಳಿ ಜಮೀನಿನಲ್ಲಿ ಎರಡು ಮೃತ ಚಿರತೆಯ ದೇಹಗಳು ಪತ್ತೆಯಾಗಿವೆ. ಮಂಗಳವಾರ ಜಯದೇವಮೂರ್ತಿ ಅವರು ತಮ್ಮ ಜಮೀನಿಗೆ ತೆರಳಿದ ಸಂಧರ್ಭದಲ್ಲಿ ಚಿರತೆಗಳ ಮೃತ ದೇಹಗಳು ಕಂಡುಬಂದಿವೆ. ಕೂಡಲೇ ಅವರು ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಆರ್‌ಎಫ್ಒ, ಸಿ.ಆರ್. ಅರುಣ್ ಕುಮಾರ್ ಹಾಗೂ ಅವರ ಸಿಬ್ಬಂದಿ ಮೃತಪಟ್ಟ ಚಿರತೆಗಳನ್ನು ಪರಿಶೀಲನೆ ಮಾಡಲಾಗಿ ಎರಡೂ ಹೆಣ್ಣು ಚಿರತೆಗಳಾಗಿವೆ. ವಯಸ್ಸು ಸುಮಾರು ೮ ತಿಂಗಳ ಮಯೋಮಾನದವಾಗಿದೆ. ಪರಸ್ಪರ ಕಿತ್ತಾಡಿಕೊಂಡು ತೀವ್ರವಾಗಿ ಗಾಯಗೊಂಡು ಹಸಿವಿನಿಂದ ನಿತ್ರಾಣಗೊಂಡು ಮೃತ ಹೊಂದಿರಬಹುದು ಎಂದು ಊಹಿಸಲಾಗಿದೆ.ಈ ಎರಡೂ ಚಿರತೆಗಳು ಮೃತಹೊಂದಿ ಎರಡು ಮೂರು ದಿನಗಳು ಆಗಿರಬಹದು. ಈ ವೇಳೆ ಕಾಡುಪ್ರಾಣಿಗಳು ಮೃತ ಚಿರತೆಯ ದೇಹವನ್ನು ತಿಂದಿರುವ ಸಾಧ್ಯತೆ ಇದೆ. ಹಾಗಾಗಿ ಒಂದು ಚಿರತೆಯ ಹೊಟ್ಟೆಯ ಭಾಗ ಕಿತ್ತುಬಂದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆತಂಕ: ಕುಣೀಕೆನಹಳ್ಳಿ ಗ್ರಾಮದಲ್ಲಿ ಎರಡು ಹೆಣ್ಣು ಚಿರತೆಗಳು ಮೃತಪಟ್ಟಿರುವ ಘಟನೆಯಿಂದ ಆಸುಪಾಸಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತಾಲೂಕಿನಲ್ಲಿ ಚಿರತೆ ದಾಳಿ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ತಾಲೂಕಿನಾದ್ಯಂತ ಹಾಡು ಹಗಲೇ ಹಲವಾರು ಚಿರತೆ ದಾಳಿಗಳು ನಡೆಯುತ್ತಿವೆ. ಜನರು ಭಯಭೀತರಾಗಿದ್ದಾರೆ. ರೈತರು ತಮ್ಮ ಹೊಲ, ತೋಟಗಳಿಗೂ ಸಹ ತೆರಳಲು ಹೆದರುತ್ತಿದ್ದಾರೆ. ಇತ್ತೀಚೆಗೆ ಶ್ರೀರಾಮಪುರ ಬಳಿ ಹಾಡುಹಗಲೇ ರೈತ ಮಹಿಳೆಯ ಮುಂದೆ ಮೇಕೆಯನ್ನು ಎಳೆದುಕೊಂಡು ಪರಾರಿಯಾಗಿತ್ತು. ರಾಮಡಿಹಳ್ಳಿಯಲ್ಲಿ ಮನೆ ಬಳಿಗೆ ಆಗಮಿಸಿದ ಚಿರತೆ ಕುರಿಯನ್ನು ಕಚ್ಚಿ ಸಾಯಿಸಿತ್ತು. ಇಂತಹ ಘಟನೆಗಳು ತಾಲೂಕಿನಾದ್ಯಂತ ಪ್ರತಿದಿನ ನಡೆಯುತ್ತಿವೆ. ಚಿರತೆ ದಾಳಿಯಿಂದ ಮೇಕೆ, ಕುರಿಗಳನ್ನು ರೈತರು ಸಾಕುವುದನ್ನು ನಿಲ್ಲಿಸಿ ಮಾರಾಟ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆಯವರು ಅಲ್ಲಲ್ಲಿ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪ್ರಮುಖ ಅಂಗಗಳನ್ನು ಹೆಚ್ಚಿನ ಪರೀಕ್ಷೆಗೆ ವಶಪಡಿಸಿಕೊಳ್ಳಲಾಗಿದೆ.ಕಾಲು ತುಂಡು
ಒಂದು ಚಿರತೆಯ ಹೊಟ್ಟೆ ಭಾಗ ಕಿತ್ತು ಬಂದಿದೆ. ಅಲ್ಲದೇ ದೇಹದ ಹಲವು ಭಾಗಗಳಲ್ಲಿ ಹಲ್ಲು, ಉಗುರಿನ ಗುರುತುಗಳು ಕಂಡು ಬಂದಿದೆ. ಮತ್ತೊಂದು ಚಿರತೆಯ ಒಂದು ಕಾಲು ತುಂಡಾಗಿದ್ದು ತುಸು ದೂರದಲ್ಲಿ ಬಿದ್ದಿದೆ. ಈ ಚಿರತೆಗೂ ಹಲ್ಲು ಮತ್ತು ಉಗುರಿನ ಗುರುತುಗಳಿರುವ ಗಾಯಗಳು ಕಂಡುಬಂದಿವೆ. ಚಿರತೆಯ ಯಾವುದೇ ಭಾಗಗಳು ಕಳುವಾಗಿಲ್ಲ. ಹಾಗಾಗಿ ಚಿರತೆಗಳು ಪರಸ್ಪರ ಹೊಡೆದಾಡಿಕೊಂಡು ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.