ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿದಂತೆ ಮಣ್ಣಿನ ಗಡಿಗೆ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಮನೆ ಮನೆಗಳಲ್ಲಿ ಮಣ್ಣಿನ ಗಡಿಗೆಗಳೇ ಫ್ರಿಜ್‌ಗಳಾಗುತ್ತವೆ!
ಬಿಸಿಲಿನ ಪ್ರಖರತೆ ಹೆಚ್ಚಿದೆ. ಮಧ್ಯಾಹ್ನ ಮನೆಯಿಂದ ಹೊರಗಡೆ ಬರುವುದೇ ಕಷ್ಟ. ಸೂರ್ಯನ ಕಿರಣಗಳು ಬೆಂಕಿಯುಂಡೆಗಳಾಗಿ ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತವೆ. ಮನೆಗೆ ಬಂದರೆ ತಣ್ಣನೆಯ ನೀರು ಕುಡಿಯಬೇಕು. ಹೀಗಾಗಿ ಜನರು ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದಕ್ಕಿಂತ ಮಣ್ಣಿನ ಗಡಿಗೆಗಳಲ್ಲಿ ನೀರು ಸಂಗ್ರಹಿಸಿ ಕುಡಿಯಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಮಣ್ಣಿನ ಗಡಿಗೆ ನೀರು ಕುಡಿದರೆ ಸಾಕಷ್ಟು ಅನುಕೂಲಗಳಿವೆ. ನೀರಿನ ದಾಹವನ್ನು ಇದು ಕಡಿಮೆ ಮಾಡುತ್ತದೆ.ಇಲ್ಲಿನ ನಗರಸಭೆ ಮುಂದಿನ ರಸ್ತೆಯಲ್ಲಿ ಕುಂಬಾರ ಮಹಿಳೆಯರು ಮಣ್ಣಿನ ಮಡಕೆ, ಮಣ್ಣಿನ ಕೊಡ, ಬಿಂದಿಗೆ, ಮಗ್‌ಗಳು, ನೀರಿನ ಬಾಟಲ್ ಸೇರಿದಂತೆ ವಿವಿಧ ಮಣ್ಣಿನ ಮಾದರಿ ಪಾತ್ರೆಗಳನ್ನು ಮಾರಾಟ ಮಾಡುತ್ತಾರೆ. ಅವರು ಕೂಡ್ಲಿಗಿ, ಖಾನಾಹೊಸಳ್ಳಿ, ಶಿವಪುರ, ಹಾರುವನಹಳ್ಳಿಯಿಂದ ವಿವಿಧ ರೀತಿಯ ಮಣ್ಣಿನ ಮಾದರಿಗಳನ್ನು ತರಿಸಿಕೊಂಡು ₹50ರಿಂದ ₹500ರ ವರೆಗಿನ ಮಡಕೆಗಳನ್ನು ನಿತ್ಯ ಮಾರಾಟ ಮಾಡುತ್ತಾರೆ.
ಈಗ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿರುವುದು ಕುಂಬಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ಗಡಿ ಕೈಗಾರಿಕೆಯಲ್ಲಿ ಅಂದರೆ ಕೈಯಿಂದ ತಯಾರು ಮಾಡುವ ಗಡಿಗೆಗಳನ್ನು ಕೊಂಡುಕೊಂಡರೆ ಕುಲಕಸುಬನ್ನು ಬೆಂಬಲಿಸಿದಂತಾಗುತ್ತದೆ. ನಮ್ಮ ಪೂರ್ವಜರು ಬಳಸುತ್ತಿದ್ದ ಗಡಿಗೆಗಳ ಮಹತ್ವವವನ್ನು ನಮ್ಮ ಮಕ್ಕಳಿಗೂ ತಿಳಿಸಿಕೊಟ್ಟಂತಾಗುತ್ತದೆ. ಗಡಿಗೆ ನೀರು ಕುಡಿದು ನಮ್ಮ ಆರೋಗ್ಯ ಸುಧಾರಿಸಿಕೊಳ್ಳಬಹುದು ಎನ್ನುತ್ತಾರೆ ಹೊಸಪೇಟೆ ನಿವಾಸಿ ಪ್ರಶಾಂತ್.
ಮನೆಯಲ್ಲಿ ಫ್ರಿಜ್ ಇದೆ. ಆದರೆ ಅದರಲ್ಲಿ ತಣ್ಣಾಗದ ನೀರು ಕುಡಿದರೆ ಆ ಕ್ಷಣಕ್ಕೆ ಮಾತ್ರ ಖುಷಿ ನೀಡುತ್ತದೆ. ಆದರೆ ಫ್ರಿಜ್ ನೀರಿಗಿಂತ ಮಣ್ಣಿನ ಗಡಿಗೆಯಲ್ಲಿಟ್ಟ ತಣ್ಣನೆಯ ನೀರು ಕುಡಿಯುವುದರಿಂದ ಮನಸ್ಸಿಗೆ ಸಮಾಧಾನ, ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ಹೊಸಪೇಟೆ ನಿವಾಸಿ ಶ್ರೀದೇವಿ.