ಹೊಸಪೇಟೆ: ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಕನ್ನಡ ವಿಶ್ವವಿದ್ಯಾಲಯವು ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅವುಗಳ ಪ್ರಕಟಣೆ ಪ್ರಸಾರ ಕಾರ್ಯದಲ್ಲಿ ಕನ್ನಡ ವಿಶ್ವವಿದ್ಯಾಲಯವು ನಾಡಿನಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ 33 ವರ್ಷಗಳಿಂದ ಅತ್ಯುತ್ತಮವಾದ ಪುಸ್ತಕಗಳನ್ನು ಪ್ರಕಟಿಸುವುದಷ್ಟೇ ಅಲ್ಲ, ಅದನ್ನು ವ್ಯವಸ್ಥಿತವಾಗಿ ಓದುಗರ ಮನೆ ಮನಗಳಿಗೆ ತಲುಪಿಸುವಲ್ಲಿ ಪ್ರಸಾರಾಂಗವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಾವಿರದ ಆರುನೂರಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ಪ್ರಸಾರಾಂಗವೂ ಪ್ರಕಟಿಸಿದೆ. ಈ ಪುಸ್ತಕಗಳನ್ನು ಓದುಗರಿಗೆ, ಮಾರಾಟಗಾರರಿಗೆ ತಲುಪಿಸುವಲ್ಲಿ ಸಹಕಾರಿಯಾಗಲು ಈ ಹಿಂದೆ ಇದ್ದ ವಾಹನವನ್ನು ಪುನರ್‌ನವೀಕರಿಸಿ ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳು, ಸಾಹಿತ್ಯ ಸಮ್ಮೇಳನಗಳಲ್ಲಿ ಈ ವಾಹನದ ಮೂಲಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.ಕರ್ನಾಟಕದ ಪ್ರಮುಖ ಬೌದ್ಧಿಕ, ಸಾಂಸ್ಥಿಕ ಕೇಂದ್ರವಾದ ಕನ್ನಡ ವಿಶ್ವವಿದ್ಯಾಲಯವು ಪುಸ್ತಕ ಪ್ರಕಟಣೆಗಳ ಮೂಲಕ ಕನ್ನಡ ಸರಸ್ವತ ಲೋಕದಲ್ಲಿ ತನ್ನದೇ ಆದ ಜನಮನ್ನಣೆ ಮತ್ತು ಅಧಿಕೃತತೆ ಪ್ರಾಪ್ತವಾಗಿರುವ ಈ ಹೊತ್ತಿನಲ್ಲಿ ಕನ್ನಡದ ಓದುಗರು ನಮ್ಮ ಪ್ರಸಾರಾಂಗದ ಪುಸ್ತಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡು ಓದುವ ಮೂಲಕ ಕನ್ನಡ ವಿಶ್ವವಿದ್ಯಾಲಯದ ಕಾಯಕನಿಷ್ಠೆ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.
ಇಂದಿನ ಪೀಳಿಗೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಜನರ ಬಳಿಗೆ ಪುಸ್ತಕಗಳನ್ನು ತಲುಪಿಸಲು ಈ ನವೀಕೃತ ಸಂಚಾರಿ ಪುಸ್ತಕ ಮಹತ್ತರ ಕಾರ್ಯವನ್ನು ವಹಿಸಲಿದೆ ಎಂದು ಹೇಳಿದರು.
ಪ್ರಸಾರಾಂಗದ ಸಂಚಾರಿ ಪುಸ್ತಕಾಲಯದ ಕೊಡುಗೆಯಾಗಿ ನೀಡಿರುವ ಬಲ್ಡೋಟ ಕಂಪನಿಗಳ ಸಮೂಹದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಡಾ. ನರೇಂದ್ರ ಕುಮಾರ್ ಎ. ಬಲ್ದೋಟ ಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕ ಉದ್ಘಾಟಿಸಿ, ಬಲ್ಡೋಟ ಕಂಪನಿಯು ಸಮಾಜದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಯೋಜನೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಸಂಚಾರಿ ಪುಸ್ತಕಾಲಯವನ್ನು ಕೊಡುಗೆಯಾಗಿ ನೀಡಿದೆ. ಇದನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಲಿ ಎಂದು ಆಶಿಸಿದರು.
ಪ್ರಸಾರಾಂಗದ ನಿರ್ದೇಶಕ ಡಾ. ಪಿ. ಮಹಾದೇವಯ್ಯ ಮಾತನಾಡಿ, ಪ್ರಸಾರಾಂಗವು ಪ್ರಾರಂಭದಿಂದಲೂ ಪುಸ್ತಕಗಳನ್ನು ಓದುಗರಿಗೆ ತಲುಪಿಸುವಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಇದರ ಮುಂದುವರಿದ ಭಾಗವಾಗಿ ಸಂಚಾರಿ ಪುಸ್ತಕಾಲಯದ ಮೂಲಕ ಓದುಗರ ಮನೆಗಳಿಗೆ ಪುಸ್ತಕಗಳನ್ನು ತಲುಪಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ್, ಉಪ ಪ್ರಾಚಾರ್ಯ ಪಿ. ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಹಾಯಕ ಕುಲಸಚಿವ ಎಂ.ಎಂ. ಶಿವಪ್ರಕಾಶ್ ಸ್ವಾಗತಿಸಿದರು. ಪ್ರಕಟಣಾ ಸಹಾಯಕ ಡಾ. ಮೋಹನ್ ವಂದಿಸಿದರು.