ಕನ್ನಡಪ್ರಭ ವಾರ್ತೆ ರಾಯಬಾಗ

ನಮಗೆ ರೋಗ ಬರುವ ಮುಂಚಿತವಾಗಿಯೇ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ರೋಗ ಬರದಂತೆ ನೋಡಿಕೊಂಡು ಆರೋಗ್ಯಯುತ ಜೀವನ ನಡೆಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲೂಕು ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಬಾಗ ಶಾಖೆ ಮತ್ತು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರ ಜೀವವನ್ನು ಉಳಿಸುವ ವೈದ್ಯರ ಸೇವೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ಪ್ರತಿ ವರ್ಷ ನಮ್ಮ ದೇಹದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.ಬಿಮ್ಸ್ ವೈದ್ಯ ಡಾ.ಎ.ಎಸ್.ನಾಗಲಿಕರ ಮಾತನಾಡಿ, ಬಿಮ್ಸ್ ವತಿಯಿಂದ ಪ್ರಥಮ ಬಾರಿಗೆ ನ್ಯಾಯಾಲಯದ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿರುವುದು ನಮಗೆ ಹೆಮ್ಮೆಯಾಗಿದೆ. ಆರೋಗ್ಯವಂತ ಶರೀರ ಹೊಂದಲು ಮನೆಯ ಊಟ ಮಾಡುವುದು ಉತ್ತಮ. ಮನುಷ್ಯ ಸತ್ತ ನಂತರ ಆಸ್ಪತ್ರೆಗೆ ದೇಹ ದಾನ ಮಾಡಿದರೆ, ಅನೇಕ ಅಂಗಾಂಗ ವೈಕಲ್ಯ ಇರುವ ಜೀವಗಳನ್ನು ಉಳಿಸಬಹದು. ಪ್ರತಿಯೊಬ್ಬರು ಈ ಶಿಬಿರದ ಪ್ರಯೋಜನ ಪಡೆದು ಆರೋಗ್ಯದಾಯಕ ಜೀವನ ನಡೆಸುವಂತೆ ತಿಳಿಸಿದರು.ಅಧ್ಯಕ್ಷತೆಯನ್ನು ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರೀಯಾ ಭಟ್ಟಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದಾನಪ್ಪ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಉಮೇಶ ಪೋಳ, ಸಿಪಿಐ ಎಮ್.ಎಮ್.ಡಪ್ಪಿನ, ಬೆಳಗಾವಿ ಬಿಮ್ಸ್ ನಾಮ ನಿರ್ದೇಶಿತ ಸದಸ್ಯ ಆರ್.ಎಸ್.ಶಿರಗಾಂವೆ, ವೈದ್ಯರಾದ ಡಾ.ಸಿ.ಬಿ.ಪಾಟೀಲ, ಡಾ.ರವಿ ಅಜೂರ, ಡಾ.ಸುಕುಮಾರ ನಾವ್ಹಿ, ಡಾ.ಪ್ರಶಾಂತ, ತಾಲೂಕು ಪಂಚಾಯತಿ ಇಒ ಅರುಣ ಮಾಚಕನೂರ, ಬಿ.ಸಿ.ಎಮ್ ಅಧಿಕಾರಿ ಕಲ್ಪನಾ ಕಾಂಬಳೆ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಲ್.ಕೆರೂರೆ, ಕಾರ್ಯದರ್ಶಿ ಆರ್.ಎಸ್.ಹಳಪ್ಪಗೋಳ, ಸಹ ಕಾರ್ಯದರ್ಶಿ ಎಮ್.ಬಿ.ಬಂತೆ, ಖಜಾಂಚಿ ಸವಿತಾ ಸಂಗೋಟೆ, ವಿನೋದ ಚವ್ಹಾಣ, ಮಲ್ಲಿಕ ಕೊರಬು, ಬಿಮ್ಸ್ ವೈದ್ಯರು, ವಕೀಲರು ಹಾಗೂ ಸರ್ಕಾರಿ ನೌಕರರು ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.