ಅಲ್ಪಸಂಖ್ಯಾತರಿಗೆ ಭಾರತ ವಿಶ್ವದಲ್ಲೇ ಸುರಕ್ಷಿತ: ಅಲ್ಪಸಂಖ್ಯಾತರ ಆಯೋಗದ ಇಕ್ಬಾಲ್ ಸಿಂಗ್‌

| Published : Jan 20 2025, 01:33 AM IST

ಅಲ್ಪಸಂಖ್ಯಾತರಿಗೆ ಭಾರತ ವಿಶ್ವದಲ್ಲೇ ಸುರಕ್ಷಿತ: ಅಲ್ಪಸಂಖ್ಯಾತರ ಆಯೋಗದ ಇಕ್ಬಾಲ್ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶ ಇಡೀ ವಿಶ್ವದಲ್ಲಿಯೇ ಎಲ್ಲಾ ಅಲ್ಪಸಂಖ್ಯಾತರಿಗೆ ಅತಿ ಸುರಕ್ಷಿತವಾದ ಸ್ಥಳವಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸರದಾರ ಇಕ್ಬಾಲ್ ಸಿಂಗ್ ಲಾಲಪೂರಾ ನುಡಿದರು.

9 ಸಾಧಕರಿಗೆ ಸರ್ದಾರ್ ಜೋಗಾ ಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ

ಕನ್ನಡಪ್ರಭ ವಾರ್ತೆ ಬೀದರ್

ಭಾರತ ದೇಶ ಇಡೀ ವಿಶ್ವದಲ್ಲಿಯೇ ಎಲ್ಲಾ ಅಲ್ಪಸಂಖ್ಯಾತರಿಗೆ ಅತಿ ಸುರಕ್ಷಿತವಾದ ಸ್ಥಳವಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸರದಾರ ಇಕ್ಬಾಲ್ ಸಿಂಗ್ ಲಾಲಪೂರಾ ನುಡಿದರು.

ನಗರದಲ್ಲಿ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ವತಿಯಿಂದ ಗುರು ನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಸರ್ದಾರ್ ಜೋಗಾ ಸಿಂಗ್‌ ಅವರ 92 ನೇ ಜನ್ಮದಿನಾಚರಣೆ ಅಂಗವಾಗಿ ಗುರು ನಾನಕ ದೇವ್ ಎಂಜಿನಿಯರಿಂಗ್ ಕಾಲೇಜ್‌ನ ಗುರು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 9 ಜನರಿಗೆ ಸರ್ದಾರ್ ಜೋಗಾಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಶೇ. 22ರಷ್ಟು ಇದ್ದ ಅಲ್ಪಸಂಖ್ಯಾತರು ಇಂದು ಶೇ. 6ಕ್ಕೆ ಇಳಿದಿದೆ. ಅದೇ ರೀತಿ ಬಾಂಗ್ಲಾದೇಶದಲ್ಲಿ ಶೇ. 28 ರಿಂದ 12ಕ್ಕೆ ಕುಸಿದಿದೆ. ಆದರೆ ನಮ್ಮ ಭಾರತ ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ದಿನೇ ದಿನೆ ಹೆಚ್ಚಳ ಆಗುತ್ತಿದೆ. ಅಲ್ಲದೇ ಇಲ್ಲಿನ ಅಲ್ಪಸಂಖ್ಯಾತರಿಗೆ ಸರ್ಕಾರವು ಎಲ್ಲ ರೀತಿಯ ಮೂಲಭೂತ ಸೌಲಭ್ಯ ನೀಡುತ್ತಿದೆ. ಹೀಗಾಗಿ ಇಂತಹ ಭೂಮಿಯಲ್ಲಿ ನಾವು ಜನ್ಮ ತಾಳಿದ್ದು ನಾವು ಪುಣ್ಯವಂತರಾಗಿದ್ದೇವೆ ಎಂದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಅಭಿನಂದನೆ ಸಲ್ಲಿಸಿ ಗುರುನಾನಕ ಸಂಸ್ಥೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅವಶ್ಯಕ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಉತ್ಕೃಷ್ಠತಾ ಸೇವಾ ರತ್ನ ಪ್ರಶಸ್ತಿಯನ್ನು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸರದಾರ ಇಕ್ಬಾಲ ಸಿಂಗ್ ಲಾಲಪೂರಾ, ಶೈಕ್ಷಣಿಕ ಶ್ರೇಷ್ಠತೆ ಪ್ರಶಸ್ತಿಯನ್ನು ಡಾ.ಅನೀಲ ಡಿ. ಸಹಸ್ತ್ರಬುದ್ದೆ, ಪ್ರಮುಖ ಹಳೆ ವಿದ್ಯಾರ್ಥಿಗಳ ಪ್ರಶಸ್ತಿಯನ್ನು ಅಮರನಾಥ ಜುಲೂರಿ, ಆರೋಗ್ಯ ರತ್ನ ಪ್ರಶಸ್ತಿಯನ್ನು ಡಾ.ದೇವಿ ಪ್ರಸಾದ ಶೆಟ್ಟಿ, ನ್ಯಾಯ ರತ್ನ ಪ್ರಶಸ್ತಿ ನ್ಯಾಯಮೂರ್ತಿ ಪಿ.ಎಸ್. ದಿನೇಶ ಕುಮಾರ, ಸೇವಾ ರತ್ನ ಪ್ರಶಸ್ತಿಯನ್ನು ಭಾಯಿ ಸಾಹೇಬ್ ಪ್ರೊ.ಮೋಹಿಂದ್ರಸಿಂಗ್ ಅಹಲುವಾಲಿಯಾ, ಸಂಗೀತ್ ರತ್ನ ಪ್ರಶಸ್ತಿಯು ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದು ಮೋಹನ್, ಸಮಾಜ ಸೇವಕಿ ರತ್ನ ಪ್ರಶಸ್ತಿಯು ಕುಮಾರಿ ಪೂಜಾ ಶರ್ಮಾ, ವೈದ್ಯ ರತ್ನ ಪ್ರಶಸ್ತಿಯು ಕಲಬುರಗಿಯ ಡಾ. ವಿವೇಕ ಜವಳಿ ಅವರಿಗೆ ಪ್ರದಾನ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಬಲಬೀರ್ ಸಿಂಗ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್, ಸರದಾರ ನಾನಕ ಸಿಂಗ್, ಡಾ. ಸಿ.ಮನೋಹರ್, ಪುನೀತ್ ಸಿಂಗ್, ಪವೀತ್ ಸಿಂಗ್, ಸಂಸ್ಥೆಯ ಎಲ್ಲಾ ಸಿಬ್ಬಂದಿ ಇದ್ದರು.