ಸಾರಾಂಶ
- ಮುಖ್ಯ ಬಸ್ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ಮೂಲಕ ಜನಜಾಗೃತಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಪರಿಸ್ಥಿತಿ ಏರ್ಪಟ್ಟಿದೆ. ಇಂಥ ಸಂದರ್ಭ ಯುದ್ಧದ ಸಮಯದಲ್ಲಿ ಸಾರ್ವಜನಿಕರ ಪ್ರಾಣರಕ್ಷಣೆ, ಗಾಯಗೊಂಡವರಿಗೆ ತುರ್ತು ಚಿಕಿತ್ಸೆ, ಬೆಂಕಿ ನಂದಿಸುವ ಕ್ರಮಗಳ ಬಗ್ಗೆ ತಹಸೀಲ್ದಾರ್ ಎನ್.ಜೆ.ನಾಗರಾಜ್ ನೇತೃತ್ವದಲ್ಲಿ ಭಾನುವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಅಣಕು ಪ್ರದರ್ಶನ ನಡೆಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು.ಯುದ್ಧ ನಡೆಯುತ್ತಿರುವ ಸಂದರ್ಭಗಳಲ್ಲಿ ಬಾಂಬ್‌ಗಳು ಬಿದ್ದು ಅಗ್ನಿ ಅನಾಹುತ, ಸಾವು-ನೋವುಗಳು ಸಂಭವಿಸಿದ ಸಂದರ್ಭಗಳಲ್ಲಿ ರಕ್ಷಣಾ ಪಡೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ, ರಕ್ಷಣಾ ತಂಡಗಳು ಹೇಗೆ ಕಾರ್ಯಗಳನ್ನು ನಿರ್ವಹಿಸುತ್ತವೆ ಎನ್ನುವುದರ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಅಣಕು ಪ್ರದರ್ಶನ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.
ಈ ಅಣಕು ಪ್ರದರ್ಶನಕ್ಕೆ ಬಸ್ ನಿಲ್ದಾಣದಲ್ಲಿ ಪುರಸಭೆಯವರು ಮನೆ ಆಕಾರದ ಗುಡಿಸಲನ್ನು ನಿರ್ಮಿಸಿದ್ದರು. ಬಾಂಬ್ ಬೀಳುವ ಸದ್ದಿನ ರೂಪಕವಾಗಿ ಪಟಾಕಿ ಸಿಡಿಸಿದಾಗ, ಅಣಕು ಗುಡಿಸಿಲಿಗೆ ಬೆಂಕಿಯನ್ನು ಹಚ್ಚಿದಾಗ, ವೇಗವಾಗಿ ಬಂದ ಅಗ್ನಿಶಾಮಕ ದಳದ ವಾಹನ ಸಿಬ್ಬಂದಿ ಬೆಂಕಿ ನಂದಿಸಿದರು. ಟ್ಯಾಂಕರ್‌ನಿಂದ ಬೆಂಕಿ ನಂದಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗಳಿಗೆ ಸಾಗಿಸುವ ದೃಶ್ಯಗಳ ಸಾರ್ವಜನಿಕರು ಯುದ್ಧ ಎಂದರೆ ಹೇಗಿರುತ್ತದೆ ಎಂಬುದರ ಅರಿವು ಪಡೆದುಕೊಂಡರು.ಅಣಕು ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕದಳ ಠಾಣಾಧಿಕಾರಿ ಎಸ್.ಎಚ್. ಕುಮಾರ್, ಸಿಬ್ಬಂದಿ ವಿಷ್ಣು ನಾಯ್ಕ್, ಪ್ರೇಮಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಕಂದಾಯ ಇಲಾಖೆಯ ಸೋಮಶೇಖರ್, ಬಿಇಒ ಜಯಪ್ಪ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಿಡಿಪಿಒ, ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು.
- - -(ಕೋಟ್) ದೇಶದಲ್ಲಿ ಪಾಕ್ ವಿರುದ್ಧ ಯುದ್ಧದ ತುರ್ತು ಪರಿಸ್ಥಿತಿ ತಲೆದೋರಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಸುಳ್ಳು ಸುದ್ದಿಗಳನ್ನು ಹಬ್ಬಿಸುವಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುದ್ಧದ ಈ ಅಣಕು ಪ್ರದರ್ಶನದಲ್ಲಿ ಅಗ್ನಿ ಶಾಮಕದಳ, ಪೊಲೀಸ್ ಇಲಾಖೆ, ಮಾತ್ರವಲ್ಲದೇ, ಪಿಡಬ್ಲ್ಯೂಡಿ, ಬೆಸ್ಕಾಂ, ಆರೋಗ್ಯ, ಪುರಸಭೆ ಆಡಳಿತಗಳ ಪಾತ್ರಗಳೇನು ಎಂದು ತಿಳಿಸುವ ಪ್ರಯತ್ನ ಮಾಡಲಾಗಿದೆ.
- ಎನ್.ಜೆ.ನಾಗರಾಜ್, ತಹಶೀಲ್ದಾರ್, ಚನ್ನಗಿರಿ- - -
-11ಕೆಸಿಎನ್‌ಜಿ2:ಚನ್ನಗಿರಿಯಲ್ಲಿ ಯುದ್ಧ ಕುರಿತು ತಾಲೂಕು ಆಡಳಿತದಿಂದ ಅಣಕು ಪ್ರದರ್ಶನ ನಡೆಯಿತು.