ರಾಮನಗರ: ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದ ಇಂದೋರ್ ನಗರದ ಅಧ್ಯಯನ ಪ್ರವಾಸದ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂದಾಗಿರುವ ರಾಮನಗರ ನಗರಸಭೆ ಇದೀಗ ಫುಡ್ ಸ್ಟ್ರೀಟ್ ಪ್ರಾರಂಭಿಸುವ ಜೊತೆಗೆ ಬಯೋಮೆಥನೇಶನ್ ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಿತು
ರಾಮನಗರ: ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದ ಇಂದೋರ್ ನಗರದ ಅಧ್ಯಯನ ಪ್ರವಾಸದ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂದಾಗಿರುವ ರಾಮನಗರ ನಗರಸಭೆ ಇದೀಗ ಫುಡ್ ಸ್ಟ್ರೀಟ್ ಪ್ರಾರಂಭಿಸುವ ಜೊತೆಗೆ ಬಯೋಮೆಥನೇಶನ್ ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಿತು.
ಜಿಲ್ಲಾ ಕೇಂದ್ರ ರಾಮನಗರವನ್ನು ಕ್ಲೀನ್ ಸಿಟಿ ಮಾಡಲು ಸಂಕಲ್ಪ ಮಾಡಿರುವ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಹಾಗೂ ಅಧಿಕಾರಿಗಳ ವರ್ಗ ಇದೀಗ ಫುಡ್ ಸ್ಟ್ರೀಟ್ ಶೆಲ್ಟರ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿತು. ಅಲ್ಲದೆ, ಸ್ಥಗಿತಗೊಂಡಿದ್ದ ಹಸಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಬಯೋಮೆಥನೇಶನ್ ಘಟಕಕ್ಕೂ ಪುನರ್ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಕೆ.ಶೇಷಾದ್ರಿ, ಇಂದೋರ್ ನಗರದಲ್ಲಿ ಕೈಗೊಂಡಿದ್ದ ಸ್ವಚ್ಛತೆ ವ್ಯವಸ್ಥೆಯ ಅಧ್ಯಯನದ ಅಂಶಗಳನ್ನು ಉಳಿದಿರುವ ಅಧಿಕಾರದ ಅವಧಿಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳ ವರ್ಗ ನಾಗರಿಕರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿ ರಾಮನಗರವನ್ನು ಸ್ವಚ್ಛ ನಗರವನ್ನಾಗಿ ರೂಪಿಸುವ ಭರವಸೆ ನೀಡಿದ್ದೆವೊ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದಾಗಿ ಹೇಳಿದರು.
45.90 ಲಕ್ಷ ವೆಚ್ಚದಲ್ಲಿ ಫುಡ್ ಸ್ಟ್ರೀಟ್:ಜಿಲ್ಲಾ ಕೇಂದ್ರ ರಾಮನಗರ ವೇಗವಾಗಿ ಬೆಳೆಯುತ್ತಿದ್ದು, ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಮಾದರಿ ನಗರವನ್ನಾಗಿ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಪಣತೊಟ್ಟು ಶ್ರಮಿಸುತ್ತಿದ್ದೇವೆ. ಇಂದೋರ್ ಅಧ್ಯಯನ ಪ್ರವಾಸದ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.
ನಗರದ ಗಾಂಧಿನಗರ ಬಡಾವಣೆಯ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲಿ ನಗರಸಭಾ ನಿಧಿ ಅಡಿಯಲ್ಲಿ 45.90 ಲಕ್ಷ ರುಪಾಯಿ ವೆಚ್ಚದಲ್ಲಿ ಫುಡ್‌ಸ್ಟ್ರೀಟ್ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಶೆಲ್ಟರ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೌಲಸೌಲಭ್ಯ ಕಲ್ಪಿಸಿ ಬೀದಿ ಬದಿ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.10 ವರ್ಷಗಳ ಹಿಂದೆ ಬಯೋಮೆಥನೇಶನ್ ಘಟಕ ಪ್ರಾರಂಭವಾಗಿ ಸ್ಥಗಿತಗೊಂಡಿತ್ತು. ಅದನ್ನು 5.40 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ಇದೀಗ ಹೋಟೆಲ್, ಕಾರಾಗೃಹ ಹಾಗೂ ವಸತಿ ನಿಲಯಗಳಿಂದ ಸಂಗ್ರಹಿಸುವ ಹಸಿ ತ್ಯಾಜ್ಯಗಳನ್ನು ಬಳಸಿಕೊಂಡು ಬಯೋಮೆಥನೇಶನ್ ಘಟಕದಲ್ಲಿ ಇಂಧನ ಉತ್ಪಾದಿಸಿ, ಅದನ್ನು ಬೀದಿ ದೀಪಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ನಗರ ರೂಪಿಸುವುದು ನಮ್ಮ ಕನಸು. ಅದನ್ನು ರಾತ್ರೋರಾತ್ರಿ ಮಾಡಲು ಸಾಧ್ಯವಿಲ್ಲ. ಕಸ ಸಂಗ್ರಹಣೆ, ಹಸಿ ಕಸ, ಒಣ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಮೊದಲು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಅಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು.ಆನಂತರ ಬ್ಲಾಕ್ ಸ್ಪಾಟ್ ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಕಾಲು ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯ ಜಾರಿಗೆ ತರಲಾಯಿತು. ನಗರಸಭೆ ಎಷ್ಟೇ ಕ್ರಮ ವಹಿಸಿದರೂ ವಿದ್ಯಾವಂತ ನಾಗರೀಕರೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಚ್ಚತೆ ವಿಚಾರದಲ್ಲಿ ಇಂಧೋರ್ ಜನರಂತೆ ಇಲ್ಲಿನ ಜನರೂ ಬದಲಾವಣೆ ತಂದುಕೊಳ್ಳಬೇಕು. ಆಗ ಮಾತ್ರ ಕ್ಲೀನ್ ಸಿಟಿಗೆ ಜನರು ಒಗ್ಗಿಕೊಳ್ಳುತ್ತಾರೆ. ಈ ಕಾರಣದಿಂದಲೇ ನಿರಂತರವಾಗಿ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಪರಿಸರ ಸ್ನೇಹಿ - ತ್ಯಾಜ್ಯ ಮುಕ್ತ ನಗರವನ್ನಾಗಿ ರೂಪಿಸಲು ಎಲ್ಲರು ಪಣ ತೊಡಬೇಕಿದೆ ಎಂದು ಕೆ.ಶೇಷಾದ್ರಿ ಹೇಳಿದರು.22 ಟನ್ ಹಸಿ ತ್ಯಾಜ್ಯ ಸಂಗ್ರಹ :
ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ಆಹಾರ, ತರಕಾರಿ, ಹಣ್ಣುಗಳ ತ್ಯಾಜ್ಯಗಳಿಂದ ಇಂಧನ ಉತ್ಪಾದಿಸುವ ಬಯೋಮೆಥನೇಶನ್ ಘಟಕ ಪುನರ್ ಆರಂಭ ಮಾಡಿದ್ದೇವೆ. ಸದ್ಯಕ್ಕೆ ನಗರದಲ್ಲಿ 22 ಟನ್ ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಪ್ರತಿ ನಿತ್ಯ ಒಂದು ಟನ್ ತ್ಯಾಜ್ಯವನ್ನು ಬಳಸಿ ಇಂಧನ ಉತ್ಪಾದಿಸಲಾಗುತ್ತಿದೆ. ಅದನ್ನು ಸಿಎನ್ ಜಿ ವಾಹನ, ಅಡುಗೆ ಅನಿಲ, ಬೀದಿ ದೀಪ ನಿರ್ವಹಣೆಗಾಗಿ ಬಳಸಬಹುದಾಗಿದೆ. ಸದ್ಯಕ್ಕೆ ನಗರಸಭೆ ಇಂಧನವನ್ನು ಬೀದಿ ದೀಪಗಳಿಗೆ ಬಳಕೆ ಮಾಡುತ್ತಿದೆ ಎಂದು ತಿಳಿಸಿದರು.ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಬಯೋಮೆಥನೇಶನ್ ಘಟಕನಿರ್ವಹಣೆ ಸಾಧ್ಯವಾಗಿರಲಿಲ್ಲ. ಈಗ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದಿಸುತ್ತಿದ್ದು, ಇದನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ.
ಆಹಾರ ಶಾಖೆ ಅಧಿಕಾರಿ ವಿಜಯ್, ಎಂಜಿನಿಯರ್‌ಗಳಾದ ನಿರ್ಮಲಾ, ವಿಶ್ವನಾಥ್, ಸುಬ್ರಹ್ಮಣ್ಯ ಸಹಕಾರ, ಬಯೋಗ್ಯಾಸ್ ಎಕ್ಸ್ ಪರ್ಟ್ ಜೋಶಿರವರ ತಂತ್ರಜ್ಞಾನ ಬಳಸಿ ಬಯೋಮೆಥನೇಶನ್ ಘಟಕ ಪುನರ್ ಪ್ರಾರಂಭಿಸಲಾಗಿದೆ ಎಂದು ಜಯಣ್ಣ ಹೇಳಿದರು.ಈ ವೇಳೆ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ಅಜ್ಮತ್, ವಿಜಯ ಕುಮಾರಿ, ಪವಿತ್ರ ಮತ್ತಿತರರು ಹಾಜರಿದ್ದರು.
ಕೋಟ್ ................ರಾಮನಗರ ಟೌನ್‌ನಲ್ಲಿ ಜನರು ಗುಡಿ ಕೈಗಾರಿಕೆ ಅವಲಂಬಿಸಿರುವ ಕಾರಣ ಸ್ವಚ್ಛತೆ ಕಾಪಾಡುವುದು ಸವಾಲಿನ ಕೆಲಸ. ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಪರಿಸರ ಸ್ನೇಹಿ ನಗರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ನಾಗರಿಕರು ಅರ್ಥ ಮಾಡಿಕೊಂಡು ಬದಲಾಗಬೇಕು.
- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರಕೋಟ್ ............
ಕಳೆದ 10 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಬಯೋಮೆಥನೇಶನ್ ಘಟಕ ಸೂಕ್ತ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿತ್ತು. ಈಗ ಅದನ್ನು 5.40 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ಪ್ರತಿನಿತ್ಯ ಒಂದು ಟನ್ ಸಾಮರ್ಥ್ಯದ ಬಯೋ ಗ್ಯಾಸ್‌ನಿಂದ ನಗರಸಭಾ ವ್ಯಾಪ್ತಿಯ ಸುಮಾರು 20 - 30 ಬೀದಿ ದೀಪಗಳು ಪ್ರತಿ ದಿನ ಬೆಳಗುತ್ತವೆ.-ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ
(ಒಂದು ಫೋಟೋ ಪ್ಯಾನಲ್‌ನಲ್ಲಿ ಬಳಸಿ)15ಕೆಆರ್ ಎಂಎನ್ 1,2.ಜೆಪಿಜಿ
1.ರಾಮನಗರದ ಗಾಂಧಿನಗರ ಬಡಾವಣೆಯಲ್ಲಿ ಫುಡ್ ಸ್ಟ್ರೀಟ್ ನ ಶೆಲ್ಟರ್ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿ ಪೂಜೆ ನೆರವೇರಿಸಿದರು.2.ಬಯೋಮೆಥನೇಶನ್ ಘಟಕ ಪುನರ್ ಪ್ರಾರಂಭಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಚಾಲನೆ ನೀಡಿದರು.