2026-27ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 114.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, 150 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿಸಿದೆ.

 ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : 2026-27ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 114.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, 150 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿಸಿದೆ.

ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆಯುವ ಗುರಿ ಇದ್ದು, ಪೂರ್ವ ಮುಂಗಾರಿನಲ್ಲಿ 2.78 ಲಕ್ಷ ಹೆಕ್ಟೇರ್‌ ಗುರಿಯಲ್ಲಿ ಈಗಾಗಲೇ 28,900 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು ಪ್ರಗತಿಯಲ್ಲಿದೆ. ಮುಂಗಾರು ಹಂಗಾಮಿನಲ್ಲಿ 4.71 ಲಕ್ಷ ಕ್ವಿಂಟಲ್‌ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಅಗತ್ಯಕ್ಕಿಂತಲೂ ಅಧಿಕ, ಅಂದರೆ 5.46 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಗಳು ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.

ಮುಂಗಾರಿಗೆ ಒಟ್ಟಾರೆ 30.05 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಿದ್ದು, ಮೇ 11 ರವರೆಗೂ 15.32 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಇದರಲ್ಲಿ ಆರಂಭಿಕ ಶಿಲ್ಕು 11.54 ಲಕ್ಷ ಮೆಟ್ರಿಕ್‌ ಟನ್‌ ಇದ್ದು 3.56 ಲಕ್ಷ ಮೆಟ್ರಿಕ್‌ ಟನ್‌ ಮಾರಾಟವಾಗಿದೆ. 11.76 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ರಾಜ್ಯಾದ್ಯಂತ ದಾಸ್ತಾನಿದೆ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

37 ಲಕ್ಷ ಹೆಕ್ಟೇರ್‌ನಲ್ಲಿ ಆಹಾರ ಧಾನ್ಯ:

ಮುಂಗಾರು ಹಂಗಾಮಿನಲ್ಲಿ ಬಹುಪಾಲು ಆಹಾರ ಧಾನ್ಯಗಳನ್ನು ಬೆಳೆಯುವ ಗುರಿ ಇದೆ. ಒಟ್ಟಾರೆ 37.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, ಜೋಳ, ಮೆಕ್ಕೆಜೋಳ, ಭತ್ತ, ನವಣೆ, ಸಾವೆ, ಬರಗು ಮತ್ತಿತರ ಆಹಾರ ಧಾನ್ಯಗಳ ಬೆಳೆಗಳು ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗುವ ಅಂದಾಜಿದೆ. ಈ ಬೆಳೆಗಳಿಂದ 101.71 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ನಿರೀಕ್ಷಿಸಲಾಗಿದೆ.

22 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ, ಹೆಸರು, ಅವರೆ ಮತ್ತಿತರ ಬೇಳೆಕಾಳುಗಳನ್ನು ಬೆಳೆಯುವ ಸಾಧ್ಯತೆ ಇದ್ದು, 12.44 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ನಿರೀಕ್ಷಿಸಲಾಗಿದೆ. ಸೂರ್ಯಕಾಂತಿ, ಶೇಂಗಾ, ಎಳ್ಳು ಮತ್ತಿತರ ಎಣ್ಣೆ ಕಾಳು ಬೆಳೆಗಳನ್ನು 7.74 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇದ್ದು, 8.08 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಆಗಬಹುದು. ಇನ್ನುಳಿದಂತೆ ಹತ್ತಿ, ಕಬ್ಬು, ತಂಬಾಕು ಮತ್ತಿತರ ಬೆಳೆಗಳನ್ನು 15.75 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಈ ಸಲ ಮಳೆಯ ಪ್ರಮಾಣ ಒಂದಷ್ಟು ಕಡಿಮೆ ಆಗುವ ಸಾಧ್ಯತೆ ಇದ್ದು ಬಿತ್ತನೆ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ಸದ್ಯದ ಸ್ಥಿತಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಅಭಾವ ಉಂಟಾಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ.

-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ