ಕನ್ನಡಪ್ರಭ ವಾರ್ತೆ ಆಲೂರು
ಆಸ್ಪತ್ರೆಗಳಿಗೆ ಪ್ರತಿದಿನ ವಿವಿಧ ಸೋಂಕು ಹಾಗೂ ಕಾಯಿಲೆಗಳಿಂದ ಬಳಲುತ್ತಿರುವ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆ ಮಾಡುವ ವೈದ್ಯರು ಹಾಗೂ ಸಿಬ್ಬಂದಿಯ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕು ಆಸ್ಪತ್ರೆಯಲ್ಲಿ ಆಸ್ಪತ್ರೆಯ ವೈದ್ಯೇತರ ಸಿಬ್ಬಂದಿಗೆ ಸೋಂಕು ತಡೆಗಟ್ಟುವ ನ್ಯುಮೊಕೋಕಲ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. "ರೋಗಿಗಳು ಕೆಮ್ಮು, ಜ್ವರ, ನ್ಯುಮೋನಿಯಾ ಸೇರಿದಂತೆ ವಿವಿಧ ಸೋಂಕುಗಳೊಂದಿಗೆ ಆಸ್ಪತ್ರೆಗೆ ಬರುತ್ತಾರೆ. ಅಂತಹವರನ್ನು ದಿನನಿತ್ಯ ನೇರವಾಗಿ ಸಂಪರ್ಕಿಸುವ ಆಸ್ಪತ್ರೆ ಸಿಬ್ಬಂದಿ ಆರೋಗ್ಯವಾಗಿದ್ದಾಗ ಮಾತ್ರ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯ. ಸಿಬ್ಬಂದಿಯ ಆರೋಗ್ಯ ರಕ್ಷಿಸುವುದು ಎಂದರೆ ರೋಗಿಗಳ ಆರೋಗ್ಯವನ್ನೂ ಕಾಪಾಡಿದಂತೆಯೇ " ಎಂದು ಹೇಳಿದರು. ಸುಮಾರು ₹2,700 ಮೌಲ್ಯದ ನ್ಯುಮೊಕೋಕಲ್ ಲಸಿಕೆ ಸೋಂಕಿನ ಅಪಾಯವನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಈ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಫಾತಿಮಾ, ವೈದ್ಯ ಡಾ. ಕಿಶೋರ್ ಹಾಗೂ ಸಿಬ್ಬಂದಿಯನ್ನು ಶಾಸಕರು ಅಭಿನಂದಿಸಿದರು. ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆಯ ವೈದ್ಯೇತರ ಸಿಬ್ಬಂದಿಗೆ ಇಂತಹ ಸೋಂಕು ತಡೆ ಲಸಿಕೆ ನೀಡುತ್ತಿರುವುದು ಇದೇ ಮೊದಲ ಪ್ರಯತ್ನವಾಗಿರಬಹುದು. ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗೂ ವಿಸ್ತರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವೈದ್ಯ ಡಾ. ಕಿಶೋರ್, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವೈದ್ಯೇತರ ಸಿಬ್ಬಂದಿ ದಿನನಿತ್ಯ ಸೋಂಕಿತ ರೋಗಿಗಳ ಸಂಪರ್ಕದಲ್ಲೇ ಕೆಲಸ ನಿರ್ವಹಿಸುತ್ತಾರೆ. ಅವರ ಆರೋಗ್ಯದ ಸುರಕ್ಷತೆಗಾಗಿ ಶಾಸಕರ ಸಹಕಾರದೊಂದಿಗೆ ಈ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೆಮ್ಮು, ಜ್ವರ, ನ್ಯುಮೋನಿಯಾ ಸೇರಿದಂತೆ ವಿವಿಧ ಸೋಂಕುಗಳ ವಿರುದ್ಧ ಮುನ್ನೆಚ್ಚರಿಕೆಯಾಗಿ ಈ ಲಸಿಕೆ ಪರಿಣಾಮಕಾರಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿಗೆ ಸುರಕ್ಷಿತ ಕಾರ್ಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹಜ್ ಯಾತ್ರೆ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಪ್ರಯಾಣಗಳಿಗೂ ಇಂತಹ ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿರುವುದು ಇದರ ಮಹತ್ವವನ್ನು ತೋರಿಸುತ್ತದೆ ಎಂದರು.ಶಾಸಕರ ಸಹಕಾರದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲು ಸಾಧ್ಯವಾಗಿದ್ದು, ರಾಜ್ಯದಲ್ಲೇ ಮಾದರಿಯಾಗುವಂತಹ ಈ ಆರೋಗ್ಯ ಕಾಳಜಿಯ ಯೋಜನೆಗೆ ಸಹಕರಿಸಿದ ಶಾಸಕ ಸಿಮೆಂಟ್ ಮಂಜು ಅವರಿಗೆ ಡಾ. ಕಿಶೋರ್ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಆಸ್ಪತ್ರೆಯ ಮೇಲಂತಸ್ತಿನಲ್ಲಿ ನೆಡೆಯುತ್ತಿರುವ ಕಾಮಗಾರಿಯನ್ನು ಶಾಸಕರು ಪರಿಶೀಲನೆ ನೆಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ನಿಸಾರ್ ಫಾತಿಮಾ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷೆ ಉಮಾ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ನವೀನ್, ಮೋಹನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.