ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಯುವ ಸಂಪತ್ತನ್ನು ಕಾಪಾಡಿಕೊಳ್ಳಲು ಮಾದಕ ವಸ್ತುಗಳಿಂದ ದೂರವಿರಬೇಕು. ಇದರ ಸಾಗಾಟ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಈ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ಪತ್ತೆಗೆ ಸ್ಕ್ಯಾನರ್ ಅಳವಡಿಕೆ ಪರಿಹಾರವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಅಭಿಪ್ರಾಯಪಟ್ಟಿದ್ದಾರೆ.

- ನ್ಯಾಯಾಧೀಶೆ ಡಿ.ಕೆ.ವೇಲಾ ಸಲಹೆ । ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ್ವೈಮಾಸಿಕ ಸಭೆ- ಪ್ರಗತಿ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಯುವ ಸಂಪತ್ತನ್ನು ಕಾಪಾಡಿಕೊಳ್ಳಲು ಮಾದಕ ವಸ್ತುಗಳಿಂದ ದೂರವಿರಬೇಕು. ಇದರ ಸಾಗಾಟ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಈ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ಪತ್ತೆಗೆ ಸ್ಕ್ಯಾನರ್ ಅಳವಡಿಕೆ ಪರಿಹಾರವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆ, ಮಾದಕ ವಸ್ತುಗಳ ತಡೆ, ಪೋಕ್ಸೋ ತಡೆ, ಭಿಕ್ಷಾಟನೆ ತಡೆ ಸೇರಿದಂತೆ ಬಾಲನ್ಯಾಯ ಕುರಿತಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಮಾದಕ ವಸ್ತುಗಳನ್ನು ರೈಲ್ವೆ ಮತ್ತು ಬಸ್‌ಗಳ ಮೂಲಕ ಸಾಗಣೆ ಮಾಡುತ್ತಿದ್ದು, ಪತ್ತೆಹಚ್ಚಲು ಸ್ಕ್ಯಾನರ್ ಅಳವಡಿಕೆ ಮಾಡಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಜತೆ ಚರ್ಚೆ ಮಾಡಿದರು. ಇದಕ್ಕೆ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಅನುದಾನ ನೀಡುವ ಮೂಲಕ ಸಾಧನ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಜು.12ರಂದು ಲೋಕ್‌ ಅದಾಲತ್:

ಜುಲೈ 12ರಂದು ಎಲ್ಲ ನ್ಯಾಯಾಲಯಗಳಲ್ಲಿ ಲೋಕ್‌ ಅದಾಲತ್ ನಡೆಯಲಿದೆ. ರಾಜಿಯಾಗಬಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಆಯಾ ಇಲಾಖೆಯವರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳಬೇಕು. ಕಕ್ಷಿದಾರರೂ ಸಹ ಈ ಅವಕಾಶದ ಉಪಯೋಗ ಪಡೆದು, ಶೀಘ್ರ ನ್ಯಾಯದಾನ ಪಡೆಯಬೇಕೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಬಾಲ್ಯವಿವಾಹ, ಪೋಕ್ಸೋ ತಡೆಗೆ ಒತ್ತು ನೀಡಿ:

ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾವಣಗೆರೆ 9, ಹರಿಹರ 1, ಹೊನ್ನಾಳಿ 2, ಚನ್ನಗಿರಿ 6 ಪ್ರಕರಣಗಳು ಸೇರಿ ಒಟ್ಟು 18 ಪ್ರಕರಣಗಳು ದಾಖಲಾಗಿವೆ. ಬಾಲ್ಯವಿವಾಹ ಮತ್ತು ಪೋಕ್ಸೋ ತಡೆಗಟ್ಟಲು ಮಕ್ಕಳಿಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕಾಗಿದೆ. ಈ ಬಗ್ಗೆ ಡಿಡಿಪಿಐ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಾಸ್ಟೆಲ್ ವಿದ್ಯಾರ್ಥಿಗಳ ವಿವರ:

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಿರುವ ಕುರಿತು ವರದಿ ಸಿದ್ಧಪಡಿಸಿ ನೀಡಬೇಕು. ವಿದ್ಯಾರ್ಥಿನಿಯರು ವ್ಯಾಸಂಗ ಮುಂದುವರಿಸಿರುವ ಬಗ್ಗೆ ಮತ್ತು ಕೈಗೊಂಡಿರುವ ಉದ್ಯೋಗದ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ವರದಿ ನೀಡಲು ತಿಳಿಸಿದರು.

ಬಾಲ ಭವನ ಮತ್ತು ಸಂಘರ್ಷಕ್ಕೆ ಒಳಗಾಗಿರುವ ಮಕ್ಕಳ ಪಾಲನೆ ಪೋಷಣೆ ಕುರಿತಂತೆ ಅವರ ಪೋಷಣೆಗಾಗಿ ಕೈಗೊಂಡಿರುವ ಕ್ರಮಗಳು, ನಿರಾಶ್ರಿತ ಪರಿಹಾರ ಕೇಂದ್ರದಲ್ಲಿನ ನಿವಾಸಿಗಳ ಕುಟುಂಬಸ್ಥರನ್ನು ಪತ್ತೆಹಚ್ಚಿ ಅವರ ಕುಟುಂಬದವರ ಬಳಿ ಕಳುಹಿಸುವ ವ್ಯವಸ್ಥೆ ಜೊತೆಗೆ ಯಾರು ಪೋಷಕರನ್ನು ನೋಡಿಕೊಳ್ಳುವುದಿಲ್ಲ, ಅದನ್ನು ಹಿರಿಯ ನಾಗರಿಕರ ಕಾಯ್ದೆಯಡಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ಜಿ.ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್, ಜಿಲ್ಲಾ ಸರ್ಕಾರಿ ವಕೀಲರಾದ ಶಾಮನೂರು ಪ್ರಕಾಶ್, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಬಿಸಿಎಂ ಹಾಸ್ಟೆಲ್‌ ವಾರ್ಡನ್‌ ಕರ್ತವ್ಯಲೋಪ ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲ ರಾವ್ ಮಾತನಾಡಿ, ಇತ್ತೀಚೆಗೆ ನಗರದ ಶ್ರೀರಾಮ ನಗರದಲ್ಲಿನ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್‌ಗೆ ರಾತ್ರಿ 10ರ ಸಮಯದಲ್ಲಿ ಅನಿರೀಕ್ಷಿತ ಭೇಟಿ ನೀಡಲಾಗಿತ್ತು. ಈ ವೇಳೆ ಹಾಸ್ಟೆಲ್ ವಾರ್ಡನ್ ಇರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದಾಗ ಬಂದು ಹೋಗುತ್ತಾರೆ ಎಂದು ಮಾಹಿತಿ ನೀಡಿದರು. ವಾರ್ಡನ್ ಹಾಸ್ಟೆಲ್‌ನಲ್ಲಿದ್ದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತು ಗಮನಿಸಬೇಕು. ಆದರೆ, ಇವರು ಕರ್ತವ್ಯಲೋಪ ಎಸಗುತ್ತಿದ್ದಾರೆ. ಹಾಸ್ಟೆಲ್‌ ನಿಯಂತ್ರಿಸುವ ವಾರ್ಡನ್ ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ನಿಗಾ ತಪ್ಪಲಿದೆ. ಇದರಿಂದ ಅನೇಕ ದೂರುಗಳಿಗೆ ಆಸ್ಪದ ಆಗಲಿದ್ದು, ಈ ರೀತಿ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

- - -

-25ಕೆಡಿವಿಜಿ41.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ್ವೈಮಾಸಿಕ ಸಭೆಯಲ್ಲಿ ನ್ಯಾಯಾಧೀಶೆ ಡಿ.ಕೆ.ವೇಲಾ ಮಾತನಾಡಿದರು.