ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ: ನಾಗಪ್ಪ ಬಕ್ಕಣ್ಣನವರ್

| Published : Sep 18 2025, 01:10 AM IST

ಸಾರಾಂಶ

ವೀರಶೈವ ವಿದ್ಯಾವರ್ಧಕ ಸಂಘದಿಂದ ಇಲ್ಲಿನ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವೀವಿ ಸಂಘದಲ್ಲಿ ಶಿಕ್ಷಕರ ದಿನಾಚರಣೆ - ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬಳ್ಳಾರಿ

ವೀರಶೈವ ವಿದ್ಯಾವರ್ಧಕ ಸಂಘದಿಂದ ಇಲ್ಲಿನ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಟಿಸಿಎಸ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ನಾಗಪ್ಪ ಬಕ್ಕಣ್ಣನವರ್, ನನ್ನ ಯಶಸ್ಸಿನ ಹಿಂದೆ ನನ್ನೆಲ್ಲಾ ಶಿಕ್ಷಕರ ಶ್ರಮವಿದೆ. ಶಿಕ್ಷಕರು ಸಮಾಜದ ಶಿಲ್ಪಿಗಳು ಹಾಗೂ ಸಮಾಜದ ಬೆನ್ನೆಲುಬು. ಶಿಕ್ಷಕರು ಹೊಸ ತಂತ್ರಜ್ಞಾನ ತಿಳಿದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳ ಕಡೆ ಗಮನ ಕೊಡಬೇಕಾಗಿದೆ. ಮಾತೃ ಭಾಷೆಯ ಮೇಲೆ ಮಕ್ಕಳಿಗೆ ಆಸಕ್ತಿ ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ ಎಂದರಲ್ಲದೆ, ವೀ ವಿ ಸಂಘದವರು ಶಿಕ್ಷಕರ ಸೇವೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತನಾಡಿದ ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ವೀವಿ ಸಂಘವು ಹಾನಗಲ್ ಶ್ರೀ ಕುಮಾರ ಮಹಾಸ್ವಾಮಿಗಳ ಮುಂದಾಲೋಚನೆಯಿಂದ ಸ್ಥಾಪಿಸಲ್ಪಟ್ಟಿತು. ಕಳೆದ 100 ವರ್ಷಗಳಿಂದ ಈ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಬದಲಾದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸ್ವೀಕರಿಸಿ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವೀವಿ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಮಾತನಾಡಿ, ಶಿಕ್ಷಕ ಸೋತರೆ ದೇಶ ಸೋತಂತೆ. ಶಿಕ್ಷಕ ದೇಶ ಕಟ್ಟುವ ಸಾಮರ್ಥ್ಯವುಳ್ಳವರು. ದೇಶದ ಭವಿಷ್ಯ ರೂಪಿಸುವವರು ಸಹ ಶಿಕ್ಷಕರೇ ಎಂದರು.ಶಿಕ್ಷಕ ಕಲಿಕೆಯಿಂದ ಎಂದೂ ಹಿಂದುಳಿಯಬಾರದು. ಶಿಕ್ಷಕ ವಿದ್ಯಾರ್ಥಿಯಂತೆ ಸದಾ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸತತ ಓದಿನಿಂದ ತನಗಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದು ಕೊಟ್ರಪ್ಪ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಮಾತನಾಡಿದರು.

ವೀವಿ ಸಂಘದಲ್ಲಿ ಸೇವೆ ಸಲ್ಲಿಸಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ 12 ಶಿಕ್ಷಕರಿಗೆ ಸಮಾರಂಭದಲ್ಲಿ ಹಾಜರಿದ್ದ ಗಣ್ಯರು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಡಾ. ತಿಪ್ಪೇಸ್ವಾಮಿ ಹಾಗೂ ಡಾ. ಎಂ.ಸದಾಶಿವ ತಮ್ಮ ಶೈಕ್ಷಣಿಕ ಸೇವಾ ದಿನಗಳ ಅನುಭವ ಹಂಚಿಕೊಂಡರು.

ವೀವಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಎಎಸ್ ಎಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಎಂ. ಮರಿದೇವಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಮೋಹನರೆಡ್ಡಿ ಉಪಸ್ಥಿತರಿದ್ದರು.

ಗಂಧರ್ವ ಸಂಗೀತ ಶಾಲೆಯ ವಿದ್ಯಾರ್ಥಿಗಳು ವಚನಗಾಯನ ಹಾಗೂ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಪ್ರಾಚಾರ್ಯ ಡಾ. ದೂಪಂ ಸತೀಶ್, ಪ್ರಾಚಾರ್ಯ ಡಾ. ಬಿ. ಗೋವಿಂದ ರಾಜು ಹಾಗೂ ಎಎಂಪಿ ವೀರೇಶಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ವೀವಿ ಸಂಘದ ವಿವಿಧ ಶಾಲಾ ಕಾಲೇಜಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.