ಬ್ರಿಟಿಷರಂತೆ ರೈತರಲ್ಲಿ ಒಡಕು ಮೂಡಿಸುತ್ತಿರುವ ಸಕ್ಕರೆ ಕಾರ್ಖಾನೆ

| Published : Sep 18 2025, 01:10 AM IST

ಬ್ರಿಟಿಷರಂತೆ ರೈತರಲ್ಲಿ ಒಡಕು ಮೂಡಿಸುತ್ತಿರುವ ಸಕ್ಕರೆ ಕಾರ್ಖಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಬ್ರಿಟಿಷರಂತೆ ರೈತರಲ್ಲಿ ಒಡಕನ್ನು ಸೃಷ್ಟಿಸಿ ಶೋಷಿಸುತ್ತಿದೆ

ಹಳಿಯಾಳ: ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಬ್ರಿಟಿಷರಂತೆ ರೈತರಲ್ಲಿ ಒಡಕನ್ನು ಸೃಷ್ಟಿಸಿ ಶೋಷಿಸುತ್ತಿದೆ, ಇದೊಂದು ನಂಬಿಕೆಗೆ ಅರ್ಹವಲ್ಲದ ಕಾರ್ಖಾನೆಯಾಗಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಗಂಭೀರವಾದ ಆರೋಪಗಳನ್ನು ಮಾಡಿದರು.

ಬುಧವಾರ ರೈತ ಬಿಜೆಪಿ ಮೋರ್ಚಾ ನಿಯೋಗದ ಮುಂದಾಳತ್ವ ವಹಿಸಿ ಅವರು ತಹಸೀಲ್ದಾರರೊಂದಿಗೆ ಮಾತನಾಡಿ, ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಹಿನ್ನೆಲೆಯಲ್ಲಿ ತಾಲೂಕಿನ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಬಿಜೆಪಿಯ ರೈತ ಮೋರ್ಚಾ ಹೊಂದಿರುವ ನಿಲುವು ಹಾಗೂ ಕಳಕಳಿಯನ್ನು ಪ್ರಸ್ತಾಪಿಸಿದರು. ಕಬ್ಬು ಬೆಳೆಗಾರರಿಗೆ ಕಾರ್ಖಾನೆಯವರು ನೀಡಬೇಕಾಗಿದ್ದ ಬಾಕಿಯನ್ನು ಪಾವತಿಸಬೇಕೆಂದು ಆಗ್ರಹಿಸಿದರು.

ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗಬೇಕೆಂಬ ಹಲವಾರು ವರ್ಷಗಳಿಂದ ಬೇಡಿಕೆ ನಮ್ಮದಾಗಿತ್ತು. ಆದರೆ ಇಂತಹ ರೈತ ವಿರೋಧಿ ರೈತರಲ್ಲಿ ಒಡಕು ಹುಟ್ಟಿಸುವ ಕಾರ್ಖಾನೆ ಇಲ್ಲಿ ಬರಬಹುದೆಂದು ಊಹಿಸಿರಲಿಲ್ಲ ಎಂದು ಸುನೀಲ ಹೆಗಡೆ ಹೇಳಿದರು.

2016-2017ನೇ ಸಾಲಿನಲ್ಲಿ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಕಾರ್ಖಾನೆಯ ಘಟಕ ಮುಖ್ಯಸ್ಥರು ಪ್ರತಿ ಟನ್ ಕಬ್ಬಿಗೆ ₹305 ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದರು. ಶಾಸಕ ಆರ್.ವಿ. ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ತಾವೇ ಮಂಜೂರು ಮಾಡಿರುವಂತೆ ಬಿಂಬಿಸಿ ತಾಲೂಕಿನೆಲ್ಲೆಡೆ ಭಾರಿ ಪ್ರಚಾರ ಮಾಡಿದ್ದರು. ಆದರೆ ಎಂಟು ವರ್ಷಗಳಾಗುತ್ತಾ ಬಂದರೂ ಕಾರ್ಖಾನೆಯವರು ಈ ₹305 ಕುರಿತು ಚಕಾರ ಎತ್ತುತ್ತಿಲ್ಲ. ಈ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಮುನ್ನ ಈ ಬಾಕಿಯನ್ನು ಪಾವತಿಸಲೇಬೇಕೆಂದರು.

ಲಗಾಣಿ ಶೋಷಣೆ ನಿಲ್ಲಿಸಿ:

ಕಬ್ಬು ಕಟಾವು, ಸಾಗಾಟದ ವಿಷಯದಲ್ಲಿ ಕಾಖಾನೆ ಆಕರಿಸುತ್ತಿರುವ ಅವೈಜ್ಞಾನಿಕ ದರ ನಿಯಂತ್ರಿಸಬೇಕು. ಕಬ್ಬು ಕಟಾವಿಗೆ ಲಗಾಣಿ ತಾಂಡಾಗಳು ನಡೆಸುವ ಶೋಷಣೆ ನಿಲ್ಲಿಸಲು ತಾಲೂಕಾಡಳಿತ ಮುಂದಾಗಬೇಕು ಎಂದರು.

ಸ್ಥಳೀಯ ಶಾಸಕರು ಈಐಡಿ ಪ್ಯಾರಿ ಕಾರ್ಖಾನೆಗೆ ಮಾತ್ರ ಕಬ್ಬನ್ನು ಪೊರೈಸಬೇಕೆಂದು ರೈತರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ, ಆದರೆ ನಾವು ಶಾಸಕರ ನಿಲವುನ್ನು ವಿರೋಧಿಸುತ್ತೆವೆ ಎಂದರು. ಕಬ್ಬು ಬೆಳೆಗಾರನಾಗಲಿ ಅಥವಾ ರೈತನಾಗಲಿ ತನಗೆ ಹೆಚ್ಚಿನ ಲಾಭ ಬರುವ ಕಡೆ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿದ್ದಾನೆ, ರೈತನ ಈ ಹಕ್ಕನ್ನು ವಿರೋಧಿಸಲು ಯಾರಿಂದಲೂ ಆಗುವುದಿಲ್ಲ ಎಂದರು.

ತಾಲೂಕಾಡಳಿತ ಇನ್ನು ಮುಂದೆ ಕಾರ್ಖಾನೆ ಜತೆ ಸಭೆ ನಡೆಸುವಾಗ ವೀಡಿಯೊ ಚಿತ್ರೀಕರಣ ನಡೆಸಬೇಕು. ಸಭೆಯ ನಡಾವಳಿಗಳ ದಾಖಲೆಗಳನ್ನು ಬರೆದಿಡಬೇಕು. ಸ್ಥಳೀಯರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ ವಾಗ್ದಾನ ಈಡೇರಿಸಲಿಲ್ಲ. ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ತನ್ನ ಸಿ.ಎಸ್.ಆರ್ ನಿಧಿಯನ್ನು ಬಳಕೆ ಮಾಡಿದ ನಿರ್ದಶನಗಳಿಲ್ಲ ಎಂದರು. ರೈತರ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ತಾಲೂಕಾಡಳಿತ ಆಯೋಜಿಸುವ ಸಭೆಗಳಿಗೆ ಬಿಜೆಪಿಯ ರೈತ ಮೊರ್ಚಾದವರನ್ನು ಆಮಂತ್ರಿಸಬೇಕೆಂದರು.

ಅಹವಾಲು ಆಲಿಸಿದ ತಹಸೀಲ್ದಾರರು ಬಿಜೆಪಿಯವರು ಮಂಡಿಸಿದ ಬೇಡಿಕೆಗಳಿಗೆ ನ್ಯಾಯ ನೀಡುವ ಭರವಸೆ ನೀಡಿದರು.

ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ಧಣ್ಣನವರ, ಮಂಗೇಶ ದೇಶಪಾಂಡೆ, ರೈತ ಮೊರ್ಚಾದ ಸೋನಪ್ಪಾ ಸುಣಕಾರ ಹಾಗೂ ಇತರ ಪದಾಧಿಕಾರಿಗಳು ಇದ್ದರು.