ಮಕ್ಕಳಿಗೆ ಹಲಸಿನ ಸಂಸ್ಕೃತಿ ಪರಿಚಯಿಸಿ: ಚಿನ್ನಸ್ವಾಮಿ

| Published : Jun 17 2024, 01:40 AM IST

ಮಕ್ಕಳಿಗೆ ಹಲಸಿನ ಸಂಸ್ಕೃತಿ ಪರಿಚಯಿಸಿ: ಚಿನ್ನಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಲಸಿನ ಅಡುಗೆಗಳು ಮತ್ತು ಹಲಸಿನ ಕೃಷಿಯ ಪರಿಚಯ ಮಾಡಿಕೊಡಬೇಕು. ಪ್ರತಿ ಮಗು ಒಂದಾದರೂ ಹಲಸು ನೆಟ್ಟು, ಹಲಸಿನ ಜೊತೆ ತಾನೂ ಬೆಳೆಯುವಂತಾಗಬೇಕು. ಹಿರಿಯರು ಮಕ್ಕಳಿಗೆ ಹಲಸಿನ ಸಂಸ್ಕೃತಿಯ ಪರಿಚಯ ಮಾಡಿಸಬೇಕು ಎಂದು ಚಿಂತಕ ಚಿನ್ನಸ್ವಾಮಿ ವಡ್ಡಗೆರೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಹಲಸು ಅಚ್ಚರಿಯ ಮರ. ಎಲೆಯಿಂದ ಬೀಜದವರೆಗೆ ನಾನಾ ಬಗೆಯಲ್ಲಿ ಬಳಕೆಯಾಗುವ ಕಲ್ಪವೃಕ್ಷ. ಮಕ್ಕಳಿಗೆ ಹಲಸಿನ ಮರದ ವೈವಿಧ್ಯ, ಹಲಸಿನ ಸುತ್ತಲಿನ ಕಥೆಗಳು, ಹಲಸಿನ ಅಡುಗೆಗಳು ಮತ್ತು ಹಲಸಿನ ಕೃಷಿಯ ಪರಿಚಯ ಮಾಡಿಕೊಡಬೇಕು. ಪ್ರತಿ ಮಗು ಒಂದಾದರೂ ಹಲಸು ನೆಟ್ಟು, ಹಲಸಿನ ಜೊತೆ ತಾನೂ ಬೆಳೆಯುವಂತಾಗಬೇಕು. ಹಿರಿಯರು ಮಕ್ಕಳಿಗೆ ಹಲಸಿನ ಸಂಸ್ಕೃತಿಯ ಪರಿಚಯ ಮಾಡಿಸಬೇಕು ಎಂದು ಚಿಂತಕ ಚಿನ್ನಸ್ವಾಮಿ ವಡ್ಡಗೆರೆ ಕರೆ ನೀಡಿದರು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಆಶ್ರಯದಲ್ಲಿ ನಡೆದ ಹಲಸಿನ ಹಬ್ಬದ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಿದ್ದ ಹಲಸಿನ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿದ್ದ ಪುಷ್ಕರಣಿ ಶಾಲೆಯ ಕಲಾಶಿಕ್ಷಕ ವಿಶ್ವನಾಥ್ ಮಾತನಾಡಿ, ಹಲಸು ಬಯಲುಸೀಮೆಯ ಹಣ್ಣು. ಜನಪದರ ಕಥೆ, ಹಾಡು, ನುಡಿಮಾತುಗಳಲ್ಲಿ ಹಲಸು ಹಾಸುಹೊಕ್ಕಾಗಿದೆ. ಆಹಾರದ ಭಾಗವಾಗಿದೆ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಮಕ್ಕಳಲ್ಲಿ ಹಲಸಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಹಲಸಿನ ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ವಿನಯ್ ಚಂದ್ರ ಮಾತನಾಡಿ, ಹಲಸಿನಕಾಯಿ, ಹಣ್ಣು ಮತ್ತು ಬೀಜಗಳಿಂದ ರುಚಿ ರುಚಿಯಾದ ಅಡುಗೆಗಳನ್ನು ಮಾಡಬಹುದಾಗಿದೆ. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹಲಸಿನ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಅವರು ಪ್ರಶಂಸಿದರು.

ಹಲಸಿನ ಅಡುಗೆ ಸ್ಪರ್ಧೆಯ ಮತ್ತೊಬ್ಬ ತೀರ್ಪುಗಾರರಾಗಿದ್ದ ಪಾಕ ಪ್ರವೀಣೆ ಮಂಗಳಾ ಪ್ರಕಾಶ್ ಮಾತನಾಡಿದರು.

ಹಲಸಿನ ಕೇಕ್ , ಹಲಸಿನ ಹಲ್ವ, ಹಲಸಿನ ಕಡಬು, ಹಲಸಿನ ಪಲಾವ್, ಹಲಸಿನ ಹಪ್ಪಳ, ಹಲಸಿನ ಪಾಯಸ, ಹಲಸಿನ ಹೋಳಿಗೆ, ಹಲಸಿನ ಕಬಾಬ್, ಹಲಸಿನ ಬೀಜದ ಮಾಲ್ಟ್, ಹಲಸಿನ ದೋಸೆ, ಹಲಸಿನ ವಡೆ, ಹಲಸಿನ ಹಣ್ಣಿನ ಪ್ರೂಟ್ ಸಲಾಡ್, ಹಲಸಿನ ಕುಲ್ಪಿ ಮತ್ತು ಪತ್ರೊಡೆ ಸೇರಿ ಹಲವು ಬಗೆಯ ಹಲಸಿನ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತಯಾರಿಸಲಾಗಿತ್ತು.

ಪ್ರತಿಮಾ ಪಾಟೀಲ್ (ಪ್ರಥಮ), ಮಂಜುಳ ದೇವಿ (ದ್ವಿತೀಯ) ಹಾಗೂ ಸಿಂಧೂ ಸಿ.ಎ. (ತೃತೀಯ) ಬಹುಮಾನ ಪಡೆದರು.

ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯನ್ನು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ನೀಡಿದ್ದ 300 ಗ್ರಾಂ ಹಲಸಿನ ತೊಳೆಗಳನ್ನು ಎಲ್ಲರಿಗಿಂತ ವೇಗವಾಗಿ ತಿಂದು ಮುಗಿಸಿದ ಎಸ್. ಸುವಾಸಿನಿ ಮತ್ತು ಎಸ್.ಡಿ. ಮೋಹನ್ ಕುಮಾರ್ ಪ್ರಥಮ ಸ್ಥಾನ ಗಳಿಸಿದರು.

ಮಕ್ಕಳಿಗೆ ಏರ್ಪಡಿಸಿದ್ದ ‘ನಾ ಕಂಡಂತೆ ಹಲಸು’ ಚಿತ್ರಕಲಾ ಸ್ಪರ್ಧೆಯಲ್ಲಿ ಪುಟಾಣಿಗಳಾದ ಸ್ನೇಹಾರ್ಚನ ಪ್ರಥಮ, ಎ. ರಿದ್ವಿಕ್ ದ್ವಿತೀಯ ಹಾಗೂ ಋತ್ವಿಕ್ ಶರತ್ ತೃತೀಯ ಬಹುಮಾನ ಪಡೆದರು. ಸಹಜ ಸಮೃದ್ಧದ ಸಿ.ಎನ್. ಕೇಶವಮೂರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.