ಸಾರಾಂಶ
ಧರ್ಮಸ್ಥಳ ಗ್ರಾಮ ಬುರುಡೆ ರಹಸ್ಯ ಪ್ರಕರಣದಲ್ಲಿ ಕೇರಳ ಕಮ್ಯುನಿಸ್ಟ್ ಪಕ್ಷದ ಸಂಸದರೊಬ್ಬರಿಗೆ ಸಂಕಷ್ಟ ಎದುರಾಗಿದೆ. ಕೇರಳ ಸಂಸದ ಸಂತೋಷ್ ಕುಮಾರ್ ಅವರನ್ನು ಬುರುಡೆ ಟೀಂ ಭೇಟಿ ಮಾಡಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳ ಗ್ರಾಮ ಬುರುಡೆ ರಹಸ್ಯ ಪ್ರಕರಣದಲ್ಲಿ ಕೇರಳ ಕಮ್ಯುನಿಸ್ಟ್ ಪಕ್ಷದ ಸಂಸದರೊಬ್ಬರಿಗೆ ಸಂಕಷ್ಟ ಎದುರಾಗಿದೆ. ಕೇರಳ ಸಂಸದ ಸಂತೋಷ್ ಕುಮಾರ್ ಅವರನ್ನು ಬುರುಡೆ ಟೀಂ ಭೇಟಿ ಮಾಡಿತ್ತು. ಬುರುಡೆ ತಂಡದ ಆರೋಪಿ ಚಿನ್ನಯ್ಯ ಅಲ್ಲದೆ, ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್, ಸಂತೋಷ್ ಕುಮಾರ್ ಅವರನ್ನು ಬುರುಡೆ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಹೀಗಾಗಿ ಬುರುಡೆ ಪ್ರಕರಣದಲ್ಲಿ ಕೇರಳ ಸಂಸದನ ಪಾತ್ರದ ಬಗ್ಗೆ ಎಸ್‌ಐಟಿಗೆ ಮಾಹಿತಿ ದೊರೆತಿದೆ. ಈ ವಿಚಾರವನ್ನು ಬುರುಡೆ ಟೀಂ ವಿಚಾರಣೆ ವೇಳೆ ಬಾಯಿಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್ ಕುಮಾರ್ ವಿಚಾರಣೆ ಬಗ್ಗೆ ಎಸ್ಐಟಿ ಚಿಂತನೆ ನಡೆಸಿದೆ.ಎನ್‌ಐಎಗೆ ಪತ್ರ ಬರೆದಿದ್ದ ಸಂಸದ:ಜುಲೈನಲ್ಲೇ ಕೇರಳ ಸಂಸದನ ಸಂದರ್ಶನವನ್ನು ಕುಡ್ಲ ರಾಂಪೇಜ್ ಯೂಟ್ಯೂಬರ್ ನಡೆಸಿದ್ದ. ಇದರಿಂದಾಗಿ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಬಗ್ಗೆ ಸಂಸದ ಸಂತೋಷ್ ಅತೀವ ಆಸಕ್ತಿ ಹೊಂದಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸುವ ಮೊದಲೇ ಅವರ ಸಂದರ್ಶನ ನಡೆಸಲಾಗಿತ್ತು. ಕೇರಳದಲ್ಲಿ ಬುರುಡೆ ತಂಡವನ್ನು ಭೇಟಿಯಾದ ವೇಳೆ ಸಂಸದ ಯೂಟ್ಯೂಬ್‌ಗೆ ಸಂದರ್ಶನ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೇರಳ ಸಂಸದನ ಸಂದರ್ಶನ ಜುಲೈ 17ರಂದು ಕುಡ್ಲ ರಾಂಪೇಜ್ ಯೂಟ್ಯೂಬ್‌ನಲ್ಲಿ ಪ್ರಸಾರವಾಗಿತ್ತು. ಬುರುಡೆ ಪ್ರಕರಣದ ಬಗ್ಗೆ ಸಂದರ್ಶನದ ಬಗ್ಗೆ ಸಂತೋಷ್ ವಿವರವಾಗಿ ಮಾತನಾಡಿದ್ದರು ಎಂಬುದು ಎಸ್‌ಐಟಿ ನಡೆಸಿದ ಚಿನ್ನಯ್ಯನ ವಿಚಾರಣೆ ವೇಳೆ ಪತ್ತೆಯಾಗಿತ್ತು. ಯುಟ್ಯೂಬ್‌ಗೆ ಸಂದರ್ಶನ ನಡೆಸಿದ ಬಳಿಕ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಸಿಪಿಎಂ ಸಂಸದ ಸಂತೋಷ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಕೂಡ ಬರೆದು ಆಗ್ರಹಿಸಿದ್ದರು. ಆಗ ಕರ್ನಾಟಕ ಸರ್ಕಾರ ಆರಂಭದಲ್ಲಿ ಎಸ್ಐಟಿ ರಚಿಸಿಲ್ಲ ಎಂದು ಆಕ್ಷೇಪ ಎತ್ತಿದ್ದರು. ಅನಾಮಿಕ ಚಿನ್ನಯ್ಯ ಕೋರ್ಟ್‌ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಸಂಸದ ಸಂತೋಷ್ ಕುಮಾರ್ ಪತ್ರ ಬರೆದಿದ್ದರು.