ಧರ್ಮಸ್ಥಳ: ನ್ಯಾಯಕ್ಕಾಗಿ ಸೋನಿಯಾ ಗಾಂಧಿಗೆ 50 ಮಹಿಳೆಯರಿಂದ ಪತ್ರ

| N/A | Published : Sep 06 2025, 01:00 AM IST

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿ ನಡೆಸಲಾಗುತ್ತಿರುವ ಎಸ್‌ಐಟಿ ತನಿಖೆ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತಾಗಬೇಕು ಎಂದು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ 50 ಮಹಿಳೆಯರು ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.

  ಬೆಂಗಳೂರು :  ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿ ನಡೆಸಲಾಗುತ್ತಿರುವ ಎಸ್‌ಐಟಿ ತನಿಖೆ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತಾಗಬೇಕು. ಅಲ್ಲದೆ, ತನಿಖೆಯು ಆ ದಿಕ್ಕಿನತ್ತ ಸಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ 50 ಮಹಿಳೆಯರು ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ನಟಿ ಮತ್ತು ರಂಗಕರ್ಮಿ ಅರುಂಧತಿ ನಾಗ್‌, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌, ಸಾಹಿತಿ ವಿಜಯಮ್ಮ, ನಟಿ ಸುಮನಾ ಕಿತ್ತೂರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಸಾಲಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳಾ ಸಾಧಕರು ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು? ಎಂಬ ಅಭಿಯಾನ ಆರಂಭಿಸಿದ್ದಾರೆ.

ಅಭಿಯಾನದ ಭಾಗವಾಗಿ ಇದೀಗ ಧರ್ಮಸ್ಥಳ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಲು ಮತ್ತು ಮಹಿಳೆಯರ ಮೇಲಾಗುತ್ತಿರುವ ಶೋಷಣೆ ನಿಲ್ಲುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. ಆ ನಿಟ್ಟಿನಲ್ಲಿ ಎಸ್‌ಐಟಿ ತನಿಖೆ ನಡೆಸಿ, ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ.

ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಆರಂಭವಾದ ಕೆಲ ವಾರಗಳಲ್ಲೇ ಕೆಲ ಮಾಧ್ಯಮಗಳು ಪ್ರಚೋದನಕಾರಿಯಾಗಿ ವರದಿ ಮಾಡಿವೆ. ಜತೆಗೆ ಈ ವಿಚಾರ ರಾಜಕೀಯ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಇದೆಲ್ಲದರಿಂದ ಸತ್ಯ ಹೊರಬರುವಲ್ಲಿ ವಿಳಂಬವಾಗುವಂತಾಗಿದೆ. ಅಲ್ಲದೆ, ನ್ಯಾಯವು ನೆಲದಲ್ಲಿ ಮತ್ತಷ್ಟು ಆಳಕ್ಕೆ ಹೂತು ಹೋಗುವಂತಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.

ಮತ್ತೊಂದು ಕಡೆ ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಹತ್ಯೆ, ಅತ್ಯಾ*ರ  ಮತ್ತು ದೌರ್ಜನ್ಯ ನಡೆದಿರುವ ಸಾಧ್ಯತೆ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಅದರಿಂದಾಗಿ ಅನ್ಯಾಯದ ಸುಳಿವು ದೊರೆಯುತ್ತಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಮಹಿಳಾ ಹಕ್ಕುಗಳ ಸಂಘಟನೆಗಳು ಧ್ವನಿ ಎತ್ತಿವೆ. ಅದರಲ್ಲೂ ಸೌಜನ್ಯ, ಪದ್ಮಲತಾ, ವೇದವಳ್ಳಿ ನಿಗೂಢ ಸಾವುಗಳ ಕುರಿತು ಪ್ರತಿಭಟನೆಗಳೂ ನಡೆಯುತ್ತಿವೆ ಎಂದಿದ್ದಾರೆ.

ಉಜಿರೆಯಲ್ಲಿ 424 ಸಾವು ಪ್ರಕರಣ:

ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದ ಮಾಹಿತಿಯಂತೆ 2001ರ ಜನವರಿ ಮತ್ತು 2012ರ ಅಕ್ಟೋಬರ್‌ ನಡುವೆ ಧರ್ಮಸ್ಥಳ ಮತ್ತು ಉಜಿರೆ ಪಟ್ಟಣ ವ್ಯಾಪ್ತಿಯಲ್ಲಿಯೇ ಬಾಲಕಿಯರು ಮತ್ತು ಮಹಿಳೆಯರು ಸೇರಿ ಒಟ್ಟು 424 ಸಾವುಗಳು ಸಂಭವಿಸಿವೆ. ಈ ಕುರಿತು 2018ರಲ್ಲಿ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ನೇತೃತ್ವದ ತಜ್ಞರ ಸಮಿತಿ ರಾಜ್ಯದಲ್ಲಿನ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು-ದೌರ್ಜನ್ಯಗಳ ಕುರಿತು ಸಲ್ಲಿಸಿದ ವರದಿಯಲ್ಲೂ ತಿಳಿಸಲಾಗಿದೆ.

ಧರ್ಮಸ್ಥಳ ಪ್ರದೇಶದ ಅಸಹಜ ಸಾವುಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಎಸ್‌ಐಟಿ ತನ್ನ ತನಿಖೆಯಲ್ಲಿ ಗಮನಹರಿಸಬೇಕು. ಅದಕ್ಕಾಗಿ ರಾಜ್ಯ ಸರ್ಕಾರದೊಂದಿಗೆ ನೀವು ಮಾತುಕತೆ ನಡೆಸಬೇಕು. ಅಲ್ಲದೆ, ಎಸ್‌ಐಟಿ ತನಿಖೆಯನ್ನು ದುರ್ಬಲಗೊಳಿಸುವ ಉದ್ದೇಶದೊಂದಿಗೆ ಕಾಂಗ್ರೆಸ್‌ನ ಕೆಲ ನಾಯಕರು ಹೇಳಿಕೆ ನೀಡುತ್ತಿದ್ದು, ಅದನ್ನು ತಡೆಯಬೇಕು. ಅದರೊಂದಿಗೆ ಸೌರ್ಜನ್ಯ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಲು ವಿಫಲರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸೋನಿಯಾ ಗಾಂಧಿ ಅವರನ್ನು ಮನವಿ ಮಾಡಿದ್ದಾರೆ.

Read more Articles on