ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಾಪುರ ಮೂಲದ ಟೆಕ್ಕಿ ಶೃತಿ ಸಾವಿನ ಹಿಂದೆ ಗೋವಾ ಕ್ಯಾಸಿನೋ ಲಿಂಕ್ ಏನಾದರೂ ಇದೆಯಾ ಎಂಬ ಅನುಮಾನಗಳು ಕಾಡಿವೆ. ಒಂದೂವರೆ ವರ್ಷದ ಅವಧಿಯಲ್ಲಿ ಒಂದೂವರೆ ಕೋಟಿ ರು. ಸಾಲ ಮಾಡಿದ್ದ ಶೃತಿ, ಇಷ್ಟೊಂದು ಬೃಹತ್ ಸಾಲ ಮಾಡುವುದರ ಹಿಂದಿನ ಉದ್ದೇಶವೇನು? ತೀರಿಸುವ ಬಗೆಯಾದರೂ ಹೇಗೆ? ತನ್ನ ನಾದಿನಿ ರಮ್ಯ 25 ಲಕ್ಷ ರು. ಸಾಲ ಹೇಗೆ ಕೊಟ್ಟರು? ಅಲ್ಲದೇ 27 ಲಕ್ಷ ರು. ಹೆಚ್ಚುವರಿ ಸಾಲವ ಶೃತಿಗೆ ಚಿಟ್ ಫಂಡ್ ಮೂಲಕ ಹೇಗೆ ಕೊಡಿಸಿದಳು ಎಂಬಿತ್ಯಾದಿ ಪ್ರಶ್ನೆಗಳು ಮೇಲು ನೋಟಕ್ಕೆ ನಿಗೂಢವಾಗಿ ಕಾಣಿಸುತ್ತಿವೆ.
ಶೃತಿ ಪತಿ ಡಿಪ್ಲೋಮಾ ಪದವೀಧರ ರಂಜಿತ್ ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದ, ಇದಕ್ಕಾಗಿ ಬಂಡವಾಳ ಹೂಡಲು ಸಾಲ ಮಾಡುತ್ತಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಅವನು ಎಲ್ಲಿ ಕೆಲಸ ಮಾಡುತ್ತಿದ್ದ, ಯಾವ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಎಂಬುದರ ಬಗ್ಗೆಯೂ ರಂಜಿತ್ ಹಾಗೂ ಶೃತಿ ಕುಟುಂಬಗಳಲ್ಲಿ ಅಷ್ಟಾಗಿ ಮಾಹಿತಿ ಇಲ್ಲ. ಶೃತಿ ಇಷ್ಟೊಂದು ಸಾಲ ಮಾಡಿರುವುದರ ಬಗ್ಗೆ ಆಕೆ ತಂದೆ ಮಲ್ಲಾಪುರದ ಗೊಂಚಿಗಾರ್ ತಿಪ್ಪೇಸ್ವಾಮಿಗೂ ಕೂಡಾ ಮಾಹಿತಿ ಇಲ್ಲ. ಅಷ್ಟರ ಮಟ್ಟಿಗೆ ಎಲ್ಲವೂ ಗೌಪ್ಯತೆ ಕಾಯ್ದುಕೊಂಡಿವೆ.ನನ್ನ ಮಗಳು ಒಂದು ಕಾಲು ಲಕ್ಷ ರು. ಸಂಬಳ ಪಡೆದುಕೊಂಡರೂ ಕೆಲವು ಸಲ ಮನೆ ಬಾಡಿಗೆ ಕಟ್ಟಲು ದುಡ್ಡಿಲ್ಲ ಎಂದು ಕೇಳುತ್ತಿದ್ದಳು, ಆಕೆಯ ತಂಗಿ ಬಳಿ ಮೊಬೈಲ್ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ದಳು, ಕಷ್ಟ ಎಂದಾಗಲೆಲ್ಲ ಹಣ ಕೊಟ್ಟಿದ್ದೇನೆ ಎಂಬ ಅಚ್ಚರಿಯ ಮಾತುಗಳ ಹರುವುತ್ತಾರೆ ತಂದೆ ಗೊಂಚಿಗಾರ್ ತಿಪ್ಪೇಸ್ವಾಮಿ.
ನನ್ನ ಮಗಳಿಗೆ ಯಾವುದರಲ್ಲಿಯೂ ಕಡಿಮೆ ಮಾಡಿರಲಿಲ್ಲ, 30 ತೊಲ ಬಂಗಾರ ಕೊಟ್ಟಿದ್ದೆ, ಭವಿಷ್ಯದ ನಿಧಿಗಾಗಿ 30 ಲಕ್ಷ ಹಣ ಕೊಟ್ಟಿದ್ದೆ. ಆಕೆಯ ಮಗನ ನನ್ನ ಬಳಿಯೇ ಇಟ್ಟುಕೊಂಡು ಸಾಕುತ್ತಿದ್ದೆ. ಅಡಿಕೆ ತೋಟದಿಂದ ಬಂದ ಹಣವ ಮಗಳಿಗೆ ಖುಷಿಯಿಂದಲೇ ಖರ್ಚು ಮಾಡಿದ್ದೇನೆ ಎನ್ನುತ್ತಾರವರು.ಶೃತಿ ಸಾವಿಗೂ ಮುನ್ನ ಕಳಿಸಿದ ವಾಯ್ಸ್ ಮೆಸೇಜ್‌ನಲ್ಲಿ ಎಲ್ಲಿಯೂ ಕೂಡಾ ತನ್ನ ಪತಿ ರಂಜಿತ್ ಬಗ್ಗೆ ಆಕ್ಷೇಪಣೆ ಮಾತುಗಳನ್ನಾಡಿಲ್ಲ. ಯಾವ ಆಪಾದನೆಗಳ ಮಾಡಿಲ್ಲ. ನನ್ನ ಮಗನ ಸರಿಯಾಗಿ ನೋಡಿಕೋ ಎಂದಿದ್ದಾಳೆ. ಸೌಮ್ಯ(ನಾದಿನಿ) ಅಕ್ಕನಿಗೆ 25 ಲಕ್ಷ ರು. ಸಾಲ ವಾಪಸ್ಸು ಕೊಡಬೇಕು. ಅಲ್ಲದೇ ಬೇರೆಯವರಿಂದ 27 ಲಕ್ಷ ರು. ಸಾಲ ಕೊಡಿಸಿದ್ದಾಳೆ ಎಂಬ ಮಾತುಗಳ ಉಲ್ಲೇಖವಿದೆ. ಇದರಾಚೆಗೆ ಉಳಿದವರಿಗೆ ಕೊಡಬೇಕಾದ ಸಾಲದ ಪ್ರಸ್ತಾಪವೇ ಇಲ್ಲದಿರುವುದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಈ ಕಾಲದಲ್ಲಿ ಸಾಲ ಕೇಳಿದರೆ ಒಂದೆರೆಡು ಲಕ್ಷಗಳು ಹುಟ್ಟುವುದು ಕಷ್ಟ. ಆಸ್ತಿ, ಶ್ಯೂರಿಟಿ ಕೊಟ್ಟರೂ 10 ಲಕ್ಷದಷ್ಟು ಸಿಗಬಹುದು. ಆದರೆ ತಮ್ಮನ ಹೆಂಡತಿಗೆ ಸೌಮ್ಯ 25 ಲಕ್ಷದಷ್ಟು ಬೃಹತ್ ಮೊತ್ತದ ಸಾಲ ಹೇಗೆ ಕೊಟ್ಟರು. ಸಾಲ ವಾಪಾಸ್ಸು ಪಡೆವ ಬಗ್ಗೆ ಇದ್ದ ಖಾತರಿಯಾದರೂ ಏನು? 25 ಲಕ್ಷ ರು. ಸಾಲ ಕೊಡಬೇಕಾದರೆ ಅವರಿಗಿದ್ದ ಆದಾಯದ ಮೂಲ ಯಾವುದು? ಅವರೇಕೆ ಅಷ್ಟೊಂದು ಆಸಕ್ತಿ ವಹಿಸಿ ಸಾಲ ಕೊಟ್ಟರು. ಬೇರೆಯವರಿಂದ ಪ್ರತ್ಯೇಕ 27 ಲಕ್ಷ ರು. ಹೇಗೆ ಸಾಲ ಕೊಡಿಸಿದರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳು ಹೊರ ಬರಬೇಕಿದೆ.ಇತ್ತೀಚಿನ ವರ್ಷಗಳಲ್ಲಿ ದಿಡೀರ್ ಸಾಲಗಳ ಮಾಡಿ ನಂತರ ಸಾವು ನೋವುಗಳು ಸಂಭಿಸುವುದರ ಹಿಂದೆ ಜೂಜಿನಂತಹ ಕೆಟ್ಟ ವ್ಯಸನಗಳಿವೆ. ಶೃತಿ ಪತಿ ರಂಜಿತ್ ಏನಾದರೂ ಗೋವಾದ ಕ್ಯಾಸಿನೋ ಹಿಂದೆ ಬಿದ್ದಿದ್ದರಾ ? ಜೂಜಾಡಲು ಹಣಕ್ಕಾಗಿ ಪತ್ನಿ ಮೂಲಕ ಸಾಲ ಮಾಡಿಸಿದರಾ ಎಂಬ ಶಂಕೆಗಳೂ ಕೂಡಾ ದಟ್ಟವಾಗಿವೆ.
ನನ್ನ ಮಗಳು ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅನ್ನಿಸುತ್ತಿಲ್ಲ. ಆತ್ಮಹತ್ಯೆ ಹಿಂದೆ ಪ್ರಚೋದನೆಯಿದೆ. ಆತ್ಮಹತ್ಯೆ ಹಾಗೂ ಸಾಲದ ಹಿಂದಿನ ಒಟ್ಟಾರೆ ಸಂಗತಿಗಳ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳುತ್ತಾರೆ ತಂದೆ ಗೊಂಚಿಗಾರ್ ತಿಪ್ಪೇಸ್ವಾಮಿ.ಹೊಳಲ್ಕೆರೆ ತಾಲೂಕಿನ ಬಾಣಗೆರೆ ಗ್ರಾಮದ ಗಂಡನ ಮನೆ ನೆಲದಲ್ಲಿ ಶೃತಿ ಹೂತು ಹೋಗಿದ್ದಾಳೆ. ಅಂತ್ಯ ಸಂಸ್ಕಾರಕ್ಕೆ ಬಾರದ ಪತಿ ರಂಜಿತ್ ಬುಧವಾರ ಸಂಜೆಯಾದರೂ ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.